ಕುಮಟಾ: ತಾಲ್ಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಶಿಕ್ಷಕ ವೃತ್ತಿಯಿಂದ ವಯೋನಿವೃತ್ತಿಗೊಂಡ ಸ್ಥಳೀಯರಾದ ಉಮೇಶ ನಾಯ್ಕರವರನ್ನು ” ಸದ್ಗುರು ಸಂಪನ್ನ ” ಎಂಬ ಉಪಾದಿಯೊಂದಿಗೆ ಆಪ್ತವಾಗಿ ಸನ್ಮಾನಿಸಲಾಯಿತು.
ಮೂರು ದಶಕಗಳ ಸೇವೆಗೆ ಗೌರವ
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಉಮೇಶ ನಾಯ್ಕರವರು ಸರಿಸುಮಾರು ಮೂರು ದಶಕಗಳಿಗೂ ಮಿಕ್ಕಿ ಶಿಕ್ಷಕರಾಗಿ ಸಲ್ಲಿಸಿದ ಸೇವೆಯು ಅನನ್ಯವಾಗಿದ್ದು, ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಅವರನ್ನು ಅಭಿನಂದಿಸಬೇಕಾದದು ಸಾಂಸ್ಕೃತಿಕವಾದ ಬದ್ಧತೆ ಎಂದ ವಿದ್ಯಾಪೀಠದ ಗೌರವಾಧ್ಯಕ್ಷರಾದ ಸಂಸ್ಕೃತಾಧ್ಯಾಪಕ ಮಂಜುನಾಥ ಗಾಂವ್ಕರ್ ಬರ್ಗಿಯವರು, ಉಮೇಶ ನಾಯ್ಕರವರು ವಿಶ್ರಾಂತಿಯ ಬದುಕನ್ನು ರಚನಾತ್ಮಕ ಚಟುವಟಿಕೆಗಳೊಂದಿಗೆ ಸಕ್ರಿಯರಾಗಿ ಕಳೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
Read: ಗಂಟಲಲ್ಲಿ ಅನ್ನ ಸಿಲುಕಿ ಯುವಕ ದುರ್ಮರಣ
ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನಾಗರಾಜ ಕೃಷ್ಣ ನಾಯ್ಕರವರು ಮಾತನ್ನಾಡಿ, ಉಮೇಶ ನಾಯ್ಕರವರ ಕಾರ್ಯಕ್ಷೇತ್ರದಲ್ಲಿನ ಕಾರ್ಯದಕ್ಷತೆಗಾಗಿ ಅರವತ್ತಾದರೂ ಎಳೆಯರಂತಿರುವುದರಿoದ ಇನ್ನಷ್ಟು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಲು ಸಶಕ್ತರರುವುದರಿಂದ ಅವರ ನಿವೃತ್ತಿಯು ಸಮಾಜಕ್ಕೆ ಮತ್ತು ಇಲಾಖೆಗೆ ನಷ್ಟವಾಗಿದೆ ಎಂದರು. ನಿವೃತ್ತಿಯ ಬದುಕನ್ನು ಕುಟುಂಬಸ್ಥರೊoದಿಗೆ ಸಮೃದ್ಧಿಯಿಂದ ಕಳೆಯಲು ಹಾರೈಸಿದರು.
ಜೀವನದ ಅಮೃತ ಕ್ಷಣವೆಂದ ಉಮೇಶ ನಾಯ್ಕ
ಸನ್ಮಾನವನ್ನು ಸ್ವೀಕರಿಸಿದ ಉಮೇಶ ನಾಯ್ಕರವರು ಮನೆಯಂಗಳದಲ್ಲಿ ತನ್ನನ್ನು ಆತ್ಮೀಯವಾಗಿ ಸನ್ಮಾನಿಸಿದ ವಿದ್ಯಾಪೀಠಕ್ಕೆ ಮತ್ತು ಬರ್ಗಿಯೂರಿನ ಹತ್ತು ಸಮಸ್ತರ ಸಜ್ಜನಿಕೆಗೆ ಋಣಿಯಾಗಿದ್ದು, ತನ್ನ ಬದುಕಿನ ಅಮೃತ ಕ್ಷಣಗಳಲ್ಲಿ ಇದು ಒಂದು ಎಂದರು.
ಕಾರ್ಯಕ್ರಮದ ಸಂಯೋಜಕರಾದ ಊರ ಮುಖಂಡರಾಗಿರುವ ನಾರಾಯಣ ನಾಗು ನಾಯಕ, ಮನೆ ವೈದ್ಯ ಅಶೋಕ ದಯಾನಂದ ಪಂಡಿತ್, ಎಂ. ಎಸ್. ನಾಯ್ಕ ಹಾಗೂ ವಾಮನ ಪಟಗಾರ ಮೊದಲಾದವರಿದ್ದರು.
ವಿಸ್ಮಯ ನ್ಯೂಸ್, ಕುಮಟಾ