ಕಾರವಾರ: ಊಟ ಮಾಡುವಾಗ ಅನ್ನ ಗಂಟಲಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ. ಬಿಣಗಾ ಮಾಳಸವಾಡದ ನಿವಾಸಿ ಅಮಿತ್ ಮಾಳಸೇರ್ ಮೃತ ದುರ್ದೈವಿ ಯುವಕನಾಗಿದ್ದಾನೆ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಅಮಿತ್, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದ.
Read: ಕಪ್ ಎತ್ತಿ ಹಿಡಿದ ಗಣಪತಿ: ಗಮನ ಸೆಳೆದ ಆರ್‌ಸಿಬಿ ವಿಜಯೋತ್ಸವ ಶೈಲಿಯ ಗಣೇಶ
ಮನೆಯಲ್ಲಿ ಊಟ ಮಾಡುವ ವೇಳೆ ಅನ್ನದ ಅಗಳು ಗಂಟಲಲ್ಲಿ ಸಿಲುಕಿದ ಪರಿಣಾಮ ಅವರು ತೀವ್ರ ಉಸಿರಾಟ ತೊಂದರೆ ಅನುಭವಿಸಿದ್ದು, ಕೂಡಲೇ ಮನೆಯವರು ನೀರು ಕುಡಿಸಿದರೂ ಅಮಿತ್ ಅಲ್ಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಕುಟುಂಬಸ್ಥರ ಆಕ್ರಂದನ
ಆದರೆ ವೈದ್ಯರು ಪರೀಕ್ಷಿಸಿದಾಗ ಅಮಿತ್ ಮೃತಪಟ್ಟಿರುವುದು ದೃಢಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆ ಸಂಬoಧಿಸಿದoತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಿತ್ ಅವರ ಆಕಸ್ಮಿಕ ನಿಧನದಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಬಿಣಗಾ ಮಾಳಸವಾಡದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸಣ್ಣ ವಯಸ್ಸಿನಲ್ಲೇ ಇಂತಹ ದುರ್ಘಟನೆ ಸಂಭವಿಸಿರುವುದರಿಂದ ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದ್ದಾರೆ.
ಗಂಟಲಲ್ಲಿ ಆಹಾರ ಸಿಲುಕಿಕೊಂಡು ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪುವ ಘಟನೆಗಳು ಅಪರೂಪದಲ್ಲೇ ಕಂಡುಬರುವುದಾದರೂ, ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭಿಸದಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ