ಅಂಕೋಲಾ: ಸಹೋದರಿಯ ಮನೆಗೆ ಬಂದು ವಾಪಸ್ ಮನೆಗೆ ಮರಳುತ್ತಿದ್ದ ಗೃಹಿಣಿ ಇದ್ದ ಆಟೋರಿಕ್ಷಾಗೆ ಪ್ರವಾಸಿಗರಿದ್ದ ಟಿ.ಟಿ ವಾಹನ ಬಡಿದ ಪರಿಣಾಮ ಮಹಿಳೆ ಗಾಯಗೊಂಡ ಘಟನೆ ಪಟ್ಟಣದ ಅರಣ್ಯ ಇಲಾಖೆ ಕಛೇರಿ ಹತ್ತಿರ ಸಾರ್ವಜನಿಕ ಗ್ರಂಥಾಲಯದ ಎದುರು ನಡೆದಿದೆ.
ತೊಡೂರು ನಿವಾಸಿ ಜ್ಯೋತಿ ವಿಷ್ಣುದಾಸ ನಾಯ್ಕ ಎನ್ನುವವರೇ ಗಾಯಗೊಂಡ ಮಹಿಳೆಯಾಗಿದ್ದು, ಇವರು ಅಂಕೋಲಾದ ಹೊನ್ನಿಕೇರಿಯಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದು, ವಾಪಸ್ ಮನೆಗೆ ಹೊಗುವಾಗ ನೋಂದಣಿ ಸಂಖ್ಯೆಯ ಆಟೋರಿಕ್ಷಾ ಮೂಲಕ ಅಂಕೋಲಾ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಪಟ್ಟಣದ ಜೈಹಿಂದ್ ಹೈ ಸ್ಕೂಲ್ ಎದುರಿನ ರಸ್ತೆ ಬಳಿ ಈ ಅಪಘಾತ ಸಂಭವಿಸಿದೆ.
ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಬೆಂಗಳೂರಿನಿಂದ ಸುಮಾರು 14 ಪ್ರವಾಸಿಗರಿರುವ ಯುವಕರ ತಂಡ, ಬನಶಂಕರಿಯಿಂದ ಪ್ರವಾಸಿಗರ ಟೆಂಪೊ ಟ್ರಾವಲರ್ ವಾಹನದಲ್ಲಿ ಹೊರಟು, ಯಾಣ, ವಿಭೂತಿ ಪಾಲ್ಸ್ ಪ್ರವಾಸ ಮುಗಿಸಿ ಗೋಕರ್ಣಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ಅಂಕೋಲಾ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಗೂಗಲ್ ನಕ್ಷೆಯ ಸೂಚನೆ ನಂಬಿಯೋ ಏನೋ ಅವರು ಹತ್ತಿರದ ಹಿಲ್ಲೂರು ಮಾದನಗೇರಿ ಗೋಕರ್ಣ ರಸ್ತೆಯಲ್ಲಿ ಸಾಗುವ ಬದಲು,
ಅಂಕೋಲಾಕ್ಕೆ ಬಂದು ಮಂಜಗುಣಿ ಗಂಗಾವಳಿ ಸೇತುವೆ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ಪಟ್ಟಣ ಮಾರ್ಗವಾಗಿ ಸಂಚರಿಸಬೇಕಾಗಿ ಬಂದಾಗ ದಾರಿಮಧ್ಯೆ ಈ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.
ಗಾಯಾಳುವನ್ನು ಸಾಗಿಸಲು ಸ್ಥಳೀಯರು ಸಹಕರಿಸಿದರು. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ. ಅಪಘಾತದ ಘಟನೆ ಕುರಿತಂತೆ ಮತ್ತಷ್ಟು ಹೆಚ್ಚಿನ ಹಾಗೂ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ











