ಅಂಕೋಲಾ: ಕೇಣಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನವೆಂಬರ್ 15ರಂದು ಒಂದು ವರ್ಷವಾಗಲಿದ್ದು ಅಂಕೋಲಾದಲ್ಲಿ ಕರಾಳ ದಿನಾಚರಣೆ ಮತ್ತು ಬಂದ್ ಗೆ ಕರೆ ನೀಡಲಾಗಿದೆ. ಈ ನಡುವೆ ತಹಶೀಲ್ದಾರ್ ಕಾರ್ಯಾಲಯದ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಾಹದ 13ನೇ ದಿನ ಕೇಣಿ ಹಾಗೂ ಬಡಗೇರಿ ಭಾಗದ ಕೃಷಿಕರು, ಬೆಲೇಕೇರಿ ಭಾಗದ ಮೀನುಗಾರರು, ಇತರೆ ಕೆಲ ಸಂಘಟನೆಗಳು ಪಾಲ್ಗೊಂಡು ಅಂಕೋಲಾ ಮತ್ತು ಉತ್ತರ ಕನ್ನಡ ಉಳಿಸಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದರು.
ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಕೇಣಿ ವಾಣಿಜ್ಯ ಬಂದರು ಯೋಜನೆಗೆ ಸ್ಥಳೀಯರಿಂದ ಈ ಹಿಂದೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ಬಂದರು ವಿರೋಧಿ ಕಿಚ್ಚು ಕೇಣಿ ಭಾಗದ ಮೀನುಗಾರರಿಗಷ್ಟೇ ಅಲ್ಲದೆ ಸುತ್ತಮುತ್ತಲ ಹಲಮ ಹಳ್ಳಿಗಳು ಹಾಗೂ ಪಟ್ಟಣ ವ್ಯಾಪ್ತಿಯಲ್ಲೂ ಪ್ರತಿಧ್ವನಿಸುವಂತಾಗಿದ್ದು,ರೈತರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ,ಜಾತಿ ಮತ ಬೇದ ಮರೆತು ಸಾಮೂಹಿಕ ನಾಯಕತ್ವದಲ್ಲಿ ಅಂಕೋಲಾ ಮತ್ತು ಉತ್ತರ ಕನ್ನಡ ಉಳಿಸಿ ಎಂಬ ಧ್ಯೇಯದೊಂದಿಗೆ ನಿರಂತರ ಹೋರಾಟ ಮುಂದುವರಿಸಿದ್ದಾರೆ. ಕಳೆದ ವರ್ಷ ನವೆಂಬರ್ 24ರಂದು ಕೇಣಿ ಕಡಲ ತೀರದ ಮೂಲಕ ಆರಂಭವಾಗಿದ್ದ ಹೋರಾಟ, ಈ ವರ್ಷದ ನವಂಬರ್ 25ರಂದು ಒಂದು ವರ್ಷಕ್ಕೆ ತಲುಪಲಿದೆ.
ಈ ಹಿನ್ನಲೆಯಲ್ಲಿ ಅಂಕೋಲಾದಲ್ಲಿ ಕರಾಳ ದಿನಾಚರಣೆ ಮತ್ತು ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಲಾಗಿದ್ದು ,ಮಂಗಳವಾರ ಬೆಳಿಗ್ಗೆ ಪಟ್ಟಣದ ಜೈಹಿಂದ್ ಸರ್ಕಲ್ ಬಳಿ ಸಾವಿರಾರು ಹೋರಾಟಗಾರರು ಸೇರಿ ಪಟ್ಟಣ ವ್ಯಾಪ್ತಿಯಲ್ಲಿ ಬಂದರು ಭೂತದ ಅಣಕು ಶವಯಾತ್ರೆ ನಡೆಸಿ , ಬಳಿಕ ಬೃಹತ್ ಪ್ರತಿಭಟನಾ ಸಭೆ ನಡೆಸಲಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಖುದ್ದು ಹಾಜರಿದ್ದು ಈಗಲಾದರೂ ತಮ್ಮ ಸಮಸ್ಯೆಯನ್ನು ಆಲಿಸುವಂತೆ,ಇಲ್ಲದಿದ್ದರೆ ಪ್ರತಿಭಟನಾ ಸ್ಥಳ ಬಿಟ್ಟು ಕದಲೂವುದಿಲ್ಲ ಎಂದು ತಹಶೀಲ್ದಾರ್ ಅವರ ಮೂಲಕ ಸಂಬಂಧಿಸಿದವರಿಗೆ ಆಗ್ರಹಿಸಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಈ ನಡುವೆ 13ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಕೇಣಿ ಬಾಗದಲ್ಲಿ ಕೃಷಿ ಬದುಕಿನ ಮೂಲಕ ಸಂತೃಪ್ತ ಜೀವನ ನಡೆಸುತ್ತಿರುವ ಕೋಮಾರ್ ಪಂಥ ಸಮಾಜದವರು,ಬಡಗೇರಿಯ ಹಾಲಕ್ಕಿ ಸಮಾಜದವರು, ಬೆಲೇ ಕೇರಿಯ ಮೀನುಗಾರರು ಮತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದರು ಯೋಜನೆ ವಿರುದ್ಧ ದಿಕ್ಕಾರ ಕೂಗಿ ನಮ್ಮ ಸಾಂಕೇತಿಕ ಪ್ರತಿಭಟನೆ ನಡೆಸಿ,ರಕ್ತದ ಹೆಬ್ಬಟ್ಟಿನ ಮುದ್ರೆಯುಳ್ಳ ಪೋಸ್ಟ್ ಕಾರ್ಡ್ ಚಳುವಳಿ ಮೂಲಕ ಹಾಗೂ ತಹಶೀಲ್ದಾರ್ ಮೂಲಕ ಪ್ರತ್ಯೇಕ ಮನವಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸಿ ಕೇಣಿ ವಾಣಿಜ್ಯ ಬಂದರು ಯೋಜನೆ ಕೈ ಬಿಡುವಂತೆ ಆಗ್ರಹಿಸಿದ್ದು,ಸರ್ಕಾರ ಸ್ಥಳೀಯರ ಭಾವನೆಗೆ ಸ್ಪಂದಿಸದಿದ್ದಲ್ಲಿ ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಅಂಕೋಲಾ ಮತ್ತು ಉತ್ತರ ಕನ್ನಡ ಉಳಿಸಿ ಎಂಬ ಧ್ಯೇಯದ ಸರ್ವ ಸಮಾಜದ ಸಾಮೂಹಿಕ ನಾಯಕತ್ವದ ಹೋರಾಟಗಾರರರಿಗೆ ಬೆಂಬಲಿಸುವ ಮೂಲಕ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೂ ಸಿದ್ದರಿರುವುದಾಗಿ ಎಚ್ಚರಿಸಿದ್ದಾರೆ.
ವಿಶ್ವ ಮಾನವ ಹಕ್ಕುಗಳ ಸಮಿತಿ ಡಬ್ಲ್ಯು ಎಚ್ ಆರ್ ಕೆ ಪೌಂಡೇಶನ್ ಅಂಕೋಲಾ ಘಟಕದ ವತಿಯಿಂದಲೂ ತಹಶೀಲ್ದಾರ್ ಅವರಿಗೆ ಪ್ರತ್ಯೇಕ ಮನವಿ ನೀಡಿ,ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿ,ಮಾಣಿಕ್ಯ ಬಂದರು ಯೋಜನೆ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.
ನವಂಬರ್ 25ರಂದು ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ನಡೆಸುತ್ತಿರುವ ಕರಾಳ ದಿನ ಮತ್ತು ಬಂದ್ ಆಚರಣೆಗೆ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ತಾಲೂಕ ಘಟಕ ಮತ್ತು ಅಂಕೋಲಾದ ವಕೀಲರ ಸಂಘ ಮತ್ತಿತರ ಸಂಘಟನೆಗಳು ಸಹ ಬಹಿರಂಗ ಬೆಂಬಲ ಘೋಷಿಸಿದ್ದು,ವಿವಿಧ ರಾಜಕೀಯ ಪಕ್ಷಗಳು,ಸಂಘ ಸಂಸ್ಥೆಗಳು,ಸಾಮಾಜಿಕ ಮತ್ತು ಪರಿಸರ ಹೋರಾಟಗಾರರು,ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿದ್ದು, ವಾಣಿಜ್ಯ ಬಂದರು ವಿರೋಧಿ ಹೋರಾಟ ಮತ್ತಷ್ಟು ಬಲಗೊಳ್ಳುತ್ತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












