ಮುರುಡೇಶ್ವರ: ಮುರುಡೇಶ್ವರದ ಯಕ್ಷರಕ್ಷೆ ವೇದಿಕೆಯಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳ ಇದರ ಮುರುಡೇಶ್ವರ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳು ವೈದ್ಯರು ಕಲೆ ಮತ್ತು ಕಲಾವಿದರನ್ನು ಗೌರವಿಸುವುದರಿಂದ ಸಮಾಜ ಸಾಂಸ್ಕೃತಿಕವಾಗಿ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟರು. ಮುರುಡೇಶ್ವರದ ಸಾಂಸ್ಕೃತಿಕ ರಾಯಭಾರಿಯಾದ ಶ್ರೀ ಐ ಆರ್ ಭಟ್ಟರವರನ್ನು ಸನ್ಮಾನಿಸಿ ಗೌರವಿಸಿದ್ದನ್ನು ಉಲ್ಲೇಖಿಸುತ್ತ ಈ ಕಾರ್ಯವು ಶ್ಲಾಘನೀಯವಾದದ್ದು ಮತ್ತು ಅನುಕರಣೀಯವಾದುದ್ದು ಎಂದರು.

ಬೀನಾ ವೈದ್ಯ ಸ್ಕೂಲಿನ ಶೈಕ್ಷಣಿಕ ನಿರ್ದೇಶಕರಾದ ಶ್ರೀಮತಿ ಪುಷ್ಪಲತಾ ವೈದ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬರ ಜೀವನದಲ್ಲೂ ಉಲ್ಲಾಸ, ಉತ್ಸಾಹ ಮತ್ತು ಸಾಂಸ್ಕೃತಿಕ ಮನಸ್ಸನ್ನು ಹೆಚ್ಚಿಸಿಕೊಳ್ಳಲು ಸಂಗೀತದ ಆಸ್ವಾದನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ಜೀವನದ ಒತ್ತಡವನ್ನು ಶಮನಗೊಳಿಸಲು ಕಲೆಯನ್ನು ಅವಲಂಬಿಸಿದರೆ ಸಾಧ್ಯವಾಗುತ್ತದೆ. ಮುರುಡೇಶ್ವರದ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡಲು ಶ್ರೀ ಐ.ಆರ್. ಭಟ್ಟರವರ ಕೊಡುಗೆಯನ್ನು ಸ್ಮರಿಸಿದರು.
ಮುರುಡೇಶ್ವರದಲ್ಲಿ ಯಕ್ಷರಕ್ಷೆಯನ್ನು ಸ್ಥಾಪಿಸಿ ಸಂಗೀತ, ನೃತ್ಯ ಮತ್ತು ಯಕ್ಷಗಾನದ ಎಲ್ಲಾ ಪ್ರಾಕಾರಗಳಿಗೆ ವೇದಿಕೆಯನ್ನು ಕಲ್ಪಿಸಿದ ಮತ್ತು ಕಲಾಪೋಷಕರಾದ ಶ್ರೀ ಐ.ಆರ್. ಭಟ್ಟರವರಿಗೆ ರಾಗಶ್ರೀಯ “ಕಲಾಸೇವಾಶ್ರೀ”ಪ್ರಶಸ್ತಿ ನೀಡಿ, ಸನ್ಮಾನಿಸಿ ಪುರಸ್ಕರಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀ ಐ.ಆರ್. ಭಟ್ಟರವರು ಕಲೆಯ ರಹಸ್ಯವನ್ನು ಅರಿತ ನಾನು ಮುರುಡೇಶ್ವರದಲ್ಲಿ ಯಕ್ಷರಕ್ಷೆಯನ್ನು ಸ್ಥಾಪಿಸಿ ಕಲೆಯನ್ನು ಪೋಷಿಸಿದ್ದೇನೆ. ಇಂದು ನನಗೆ ನೀಡಿದ ಪ್ರಶಸ್ತಿಯಿಂದ ಧನ್ಯತೆಯನ್ನು ಪಡೆದಿದ್ದೇನೆ. ಊರಿನ ಮಕ್ಕಳು ಸಾಂಸ್ಕೃತಿಕವಾಗಿ ಬೆಳೆದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ವಿದ್ವಾಂಸರಾದ ಶ್ರೀ ಶಂಭು ಭಟ್ಟ ಕಡತೋಕ ಮಾತನಾಡಿ ಸಂಗೀತದ ಶಕ್ತಿ ಅನನ್ಯವಾದದ್ದು ಇದನ್ನು ಪಾಲಿಸುವ, ಪೋಷಿಸುವ, ಬೆಳೆಸುವ ಕಾರ್ಯ ಇಂದಿನ ಮಕ್ಕಳಿಂದ ಮತ್ತು ಪಾಲಕರಿಂದ ಆಗಬೇಕೆಂದರು.
ಬ್ಯಾಂಕ್ ಅಧಿಕಾರಿಯದ ಶ್ರೀ ಶಂಭು ಹೆಗಡೆಯವರು ತಮ್ಮ ಸ್ವರಚಿತ ಚುಟುಕುಗಳನ್ನು ವಾಚಿಸಿ, ಸಂಗೀತದ ಉಪಯೋಗ, ವಿದ್ಯಾರ್ಥಿಗಳಿಗೆ ಸಂಗೀತದ ಅನಿವಾರ್ಯತೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಂಗೀತ ಹೇಗೆ ಉಪಕರಿಸುತ್ತದೆ ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಎಲ್.ಎಂ. ಹೆಗಡೆ ಮಾತನಾಡುತ್ತಾ ಇಂದಿನ ಮಕ್ಕಳು ಸಂಸ್ಕೃತಿಕವಾಗಿ ಅರಿವನ್ನು ಸಂಪಾದಿಸಿ ಕಲೆಯನ್ನು ಆಸ್ವಾದಿಸುವ ಗುಣ ಬೆಳೆಸಿಕೊಳ್ಳುವುದರಿಂದ ನೈತಿಕ ಶಕ್ತಿ ಜಾಗ್ರತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶ್ರೀ ಎಸ್. ಜಿ. ಭಟ್ಟರವರು ಮಾತನಾಡಿ ಸಂಗೀತ ನಮ್ಮ ಮನಸ್ಸನ್ನು ಶಾಂತವಾಗಿಡಲು ಸಹಾಯಮಾಡುತ್ತದೆ ಎಂದರು. ಪಿಎಸ್ ಐ ಶ್ರೀ ಹನುಮಂತ ಬಿರಾದರ ರವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಅತಿಥಿ ಅಭ್ಯಾಗತರನ್ನು ರಾಗಶ್ರೀ ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ಶಿವಾನಂದ ಭಟ್ಟ, ಹಡಿನಬಾಳ ಸ್ವಾಗತಿಸಿ, ಪ್ರಸ್ತಾವಿಕ ನುಡಿಗೈದರು. ಕಾರ್ಯದರ್ಶಿ ಶ್ರೀ ಎನ್. ಜಿ. ಹೆಗಡೆ ಕೆಪ್ಪಕೆರೆ ವಂದಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ರಾಗಶ್ರೀ ಸಂಗೀತ ವಿದ್ಯಾಲಯದ ಉಪಶಾಕಖೆಯಾದ ಮುರುಡೇಶ್ವರದ ವಿದ್ಯಾರ್ಥಿಗಳಿಂದ ವಾದನ, ಸಂಗೀತ ಮತ್ತು ಭಜನ್ ಗಳಿಂದ ಆರಂಭಗೊಂಡಿತು ಇವರಿಗೆ ರಾಗಶ್ರೀಯ ವಿದ್ಯಾರ್ಥಿಗಳಾದ ಕು.ಪ್ರಥಮ ಭಟ್ಟ ತಬಲಾ ಸಾಥನ್ನು ಮತ್ತು ಕು. ಭಾಗ್ಯಲಕ್ಮೀ ಭಟ್ಟ ಸಂವಾದಿನಿ ಸಾಥನ್ನು ನೀಡಿದರು.
ಸಭಾ ಕಾರ್ಯಕ್ರಮದ ನಂತರ ರಾಗಶ್ರೀ ವಿದ್ಯಾಲಯದ ಶಿಕ್ಷಕಿಯಾದ ಕುಮಾರಿ ರಂಜಿತಾ ನಾಯ್ಕ ರವರಿಂದ ಹಿಂದುಸ್ತಾನಿ ಗಾಯನ ಕೇಳುಗರ ಮನಸೂರೆಗೊಂಡಿತು ಮತ್ತು ತಬಲಾ ಶಿಕ್ಷಕರಾದ ಶ್ರೀ ವಿನಾಯಕ ಭಟ್ಟ ತಬಲಾ ಸೋಲೋ ಪ್ರಸ್ತುತಪಡಿಸಿದರು.
ರಾಗಶ್ರೀಯ ಸಂಗೀತ ಗುರುಗಳು ಮತ್ತು ಖ್ಯಾತ ಹಿಂದುಸ್ತಾನಿ ಗಾಯಕರಾದ ವಿದ್ವಾನ್ ಶ್ರೀ ಶಿವಾನಂದ ಭಟ್ಟರವರು ತಮ್ಮ ಗಾಯನದಲ್ಲಿ ರಾಗ ಮಾರುಬಿಹಾಗದೊಂದಿಗೆ ಆರಂಭಿಸಿ ಹಾಡಿದ ಭಜನ್ ಗಳು ಜನರನ್ನ ಮಂತ್ರಮುಗ್ಧಗೊಳಿಸಿತು.
ಇವರಿಗೆ ತಬಲಾ ಸಾಥನ್ನು ರಾಗಶ್ರೀಯ ತಬಲಾ ಗುರುಗಳು ಮತ್ತು ಖ್ಯಾತ ತಬಲಾ ವಾದಕರಾದ ವಿದ್ವಾನ್ ಎನ್.ಜಿ.ಹೆಗಡೆ ಕಪ್ಪೆಕೇರಿ ತಬಲಾ ಸಾಥನ್ನು ನೀಡಿದರೆ, ಶ್ರೀ ಹರಿಶ್ಚಂದ್ರ ನಾಯ್ಕರವರು ಸಂವಾದಿನಿ ಸಾಥನ್ನು ನೀಡಿದರು.ವಿ.ಶಿವಾನಂದ ಭಟ್ಟರವರು ಸಂಗೀತದ ಮಹತ್ವ ಮತ್ತು ಅದನ್ನು ಹೇಗೆ ಕಾಪಿಟ್ಟುಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.ಈ ಎಲ್ಲಾ ಕಾರ್ಯಕ್ರಮವನ್ನು ಕು.ಬಿಂದು ಅವಧಾನಿ ನಿರೂಪಿಸಿದರು.











