ಯಲ್ಲಾಪುರ: ಬೈಕಿಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡ ಘಟನೆ
ತಾಲೂಕಿನ ದೇಶಪಾಂಡೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಭವಿಸಿದೆ. ಬೈಕ್ ಸವಾರ ರಾಯಚೂರ್ ಜಿಲ್ಲೆಯ ಖಾನಾಪುರ ಉಡಂಗಲ್ ನಿವಾಸಿ ನರಸಿಂಹ ನರಸಪ್ಪ ಬುಗಲಿ(24) ಎಂಬಾತ ಅಪಘಾತದಲ್ಲಿ ಸಾವಿಗೀಡಾಗಿದ್ದು, ಹಿಂಬದಿ ಸವಾರ ವೈ.ನಾಗೇಶ ನಾಯಕ್ ಎನ್ನುವವರು ಗಾಯಗೊಂಡಿದ್ದಾರೆ.
ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿಯ ಕಡೆ ಸಾಗುತ್ತಿದ್ದ ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬೈಕ್ ಸವಾರನ ತಲೆಯ ಮೇಲೆ ಲಾರಿಯ ಹಿಂಬದಿ ಟಯರ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ಚಾಲಕ ಕಿರವತ್ತಿ ಬಳಿ ಲಾರಿ ನಿಲ್ಲಿಸಿಟ್ಟು ಓಡಿ ಹೋಗಿದ್ದು ಈ ಹಿಟ್ ಎಂಡ್ ರನ್ ಕೇಸ್ ಕುರಿತಂತೆ
ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ನಿರೀಕ್ಷಕ ರಮೇಶ ಖಾನಾಪುರ ಅವರ ಮಾರ್ಗದರ್ಶನದಲ್ಲಿ ಸಂಚಾರ ಪಿ.ಎಸ್.ಐ ಸಿದ್ದಪ್ಪ ಗುಡಿ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸೆ 18 ರ ಗುರುವಾರ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಕೋಲಾದ ಅಡ್ಲೂರು ಬಳಿ ಟ್ಯಾಂಕರ್ ಲಾರಿ ,ಸಾರಿಗೆ ಸಂಸ್ಥೆಯ ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ,ಟ್ಯಾಂಕರ್ ಚಾಲಕ, ಮತ್ತು ಬಸ್ಸಿನಲ್ಲಿದ್ದ ಒರ್ವ ಪ್ರಯಾಣಿಕ ದುರ್ಮರಣ ಹೊಂದಿದ್ದು,ಅಂಕೋಲಾ ಯಲ್ಲಾಪುರ ಮಾರ್ಗ ಮಧ್ಯೆ ಹತ್ತಾರು ಕಡೆ ಅಪಾಯಕಾರಿ ಹೊಂಡ ಗುಂಡಿಗಳ ರಸ್ತೆಯಿಂದ ಹಾಗೂ ಮತ್ತಿತರ ಕಾರಣಗಳಿಂದ ದಿನ ನಿತ್ಯ ರಸ್ತೆ ಅಪಘಾತ ಸಾವು ನೋವುಗಳಾಗುತ್ತಿರುವುದು ಈ ಜಿಲ್ಲೆಯ ದುರಂತ ಎಂದೇ ಹೇಳಬಹುದಾಗಿದೆ. ಸಂಬಂಧಿತ ಎನ್ ಹೆಚ್ ಎ ಐ ಗೆ ಮೂಗುದಾರ ತೊಡಿಸಿ ,ರಸ್ತೆ ಅಭಿವೃದ್ಧಿಪಡಿಸುವವರಾರು ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ