ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ, ಸಾಮೂಹಿಕ ನಾಯಕತ್ವದಡಿ, ಅಂಕೋಲಾ ಮತ್ತು ಉತ್ತರ ಕನ್ನಡ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ , ಇದೇ ತಿಂಗಳ ಕೊನೆ ವಾರದಲ್ಲಿ ರಾಜ್ಯದ ವಿವಿಧ ಸಾಮಾಜಿಕ ಹೋರಾಟಗಾರ ನಾಯಕರ ಪಾಲ್ಗೊಳ್ಳುವಿಕೆಯಲ್ಲಿ ಅಕ್ಟೋಬರ್ 23 ರಂದು ಜ್ಯೆ ಹಿಂದ್ ಮೈದಾನದಲ್ಲಿ ಆಯೋಜಿಸಬೇಕೆಂದಿದ್ದ ಬೃಹತ್ತ ಬಹಿರಂಗ ಸಭೆ ಮತ್ತು ತಹಶೀಲ್ದಾರ ಕಾರ್ಯಾಲಯದ ಎದುರಿನ ಹೊರ ಆವರಣದಲ್ಲಿ ನಡೆಸ ಬೇಕೆಂದಿದ್ದ ಧರಣಿ ಸತ್ಯಾಗ್ರಹವನ್ನು , ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಹಾಗೂ ನಮ್ಮ ಹೋರಾಟ ಮುಂದೆ ನಿರಂತರವಾಗಿರುವುದಾಗಿ ಸಂಜೀವ ಬಲೆಗಾರ ಸೇರಿದಂತೆ ಇತರೆ ಸಂಘಟಕ ಪ್ರಮುಖರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಅಗಸ್ಟ್ 22 ರಂದು ನಡೆದ ವಾಣಿಜ್ಯ ಬಂದರು ಯೋಜನೆಯ ಪರಿಸರ ಆಲಿಕೆ ಸಭೆಯ ನಂತರ ಯೋಜನೆಯನ್ನು ವಿರೋಧಿಸಿ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದ್ದು ಎಲ್ಲರ ಸಲಹೆ, ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ನಿರಂತರ ಹೋರಾಟ ಮಾಡುವ ಉದ್ದೇಶದೊಂದಿಗೆ , ಅ 2 ರ ಗಾಂಧೀ ಜಯಂತಿಯಂದು , ಪಟ್ಟಣದ ಗಾಂಧೀ ಮೈದಾನದ ಸ್ವರ್ಣ ಉದ್ಯಾನವನದಲ್ಲಿರುವ ಗಾಂಧಿ ಮೂರ್ತಿ ಎದುರು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡು, ಮುಂದಿನ ಹಂತದ ಹೋರಾಟಕ್ಕೆ ಸಜ್ಜಾಗುತ್ತಿದ್ದೆವು.
ಆದರೆ ಜನರು ಈಗ ದೀಪಾವಳಿ ಹಬ್ಬದ ಸಂಭ್ರಮ ಮತ್ತು ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಮತ್ತಿತರರು ಭತ್ತದ ಬೆಳೆಯ ಕಟಾವು ಮತ್ತಿತರ ತುರ್ತು ಅಗತ್ಯ ಕೆಲಸ ಕಾರ್ಯಗಳಲ್ಲಿ ನಿರತರಾಗಬೇಕಿರುವುದು, ಸಭೆ ನಡೆಯುವ ಜೈಹಿಂದ್ ಮೈದಾನದಲ್ಲಿ ಬೇರೆ ಬೇರೆ ಸಂಘಟನೆಗಳು ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು, ಅಂಕೋಲಾ ಕರಾವಳಿ ಉತ್ಸವ ಮತ್ತಿತರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು, ಆಗಾಗ ಸುರಿಯುತ್ತಿರುವ ಮಳೆ ಮತ್ತಿತರ ಕಾರಣಗಳು ಹಾಗೂ 22 ರ ಮಧ್ಯಾಹ್ನದಿಂದ ತಡ ರಾತ್ರಿ ವರೆಗೆ ಪಟ್ಟಣದಲ್ಲಿ ಹೊಂಡೆ ಉತ್ಸವ ಕಾರ್ಯಕ್ರಮಗಳಿರುವುದರಿಂದ ಸಹಜವಾಗಿ ಇಂಥ ಸಂದರ್ಭಗಳಲ್ಲಿ ನಮಗೂ ಅನಿವಾರ್ಯ ಒತ್ತಡ ಇರುವುದರಿಂದ ಸಭೆಯನ್ನು ಅಕ್ಟೋಬರ್ 23 ರಂದು ನಡೆಸಲು ಕಷ್ಟ ಸಾಧ್ಯವಾಗಿರುವುದರಿಂದ,ನಮ್ಮ ಸಂಘಟನೆಯ ಮೀನುಗಾರರು ,ರೈತರು, ಕೂಲಿಕಾರ್ಮಿಕರು, ಮಧ್ಯಮವರ್ಗದವರು , ಸೇರಿದಂತೆ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಹೋರಾಟಗಾರ ಮಿತ್ರ ಬಳಗದ ಬಹುತೇಕರ ಅಭಿಪ್ರಾಯದಂತೆ, ಉದ್ದೇಶಿತ ಬಹಿರಂಗ ಸಭೆ ಮತ್ತು ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡುವುದು ಅನಿವಾರ್ಯವಾಗಿದೆ ಎಂದು ಹೋರಾಟ ಸಮಿತಿಯ ವತಿಯಿಂದ ತಿಳಿಸಲಾಗಿದೆ.
ವಾಣಿಜ್ಯ ಬಂದರು ಯೋಜನೆಯ ವಿರುದ್ಧ ನ್ಯಾಯದ ಹಾದಿಯ ಹೋರಾಟ ನಿರಂತರ ಮುಂದುವರಿಯಲಿದ್ದು ಪ್ರತಿಭಟನೆ,
ಧರಣಿ ಸತ್ಯಾಗ್ರಹ, ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ ಮೊದಲಾದ ಹೋರಾಟದ ರೂಪರೇಶೆಗಳ ಕುರಿತು ಮುಂದಿನ ದಿನಗಳಲ್ಲಿ ಮತ್ತೆ ಚರ್ಚಿಸಿ, ದಿನಗಳನ್ನು ನಿಗದಿಪಡಿಸಿ ಅಧಿಕೃತ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗುವುದು, ಹೀಗಾಗಿ ಅಂಕೋಲಾ ಮತ್ತು ಉತ್ತರ ಕನ್ನಡ ಉಳಿಸಿ ದ್ಯೇಯವಾಕ್ಯದೊಂದಿಗೆ ನಡೆಯುವ ಹೋರಾಟಕ್ಕೆ ಮುಂದೆಯೂ ತಮ್ಮೆಲ್ಲರ ಸಹಕಾರ ಬಯಸುತ್ತಿರುವುದಾಗಿ ಹೋರಾಟಗಾರ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಂದಾನು ವೇಳೆ ಮಾಹಿತಿ ಕೊರತೆಯಿಂದ ಯಾರಾದರೂ ತಮ್ಮಲ್ಲಿ ಅ23ರಂದು ಸಭೆ ಎಂದು ಗೊಂದಲ ಮೂಡಿಸಲು ಯತ್ನಿಸಿದರೆ , ತಾವು ಅದಕ್ಕೆ ಕಿವಿ ಗೊಡದೇ , ನಮ್ಮ ಸಂಘಟನೆಯವರ ಹೇಳಿಕೆಯನ್ನು ಮಾತ್ರ ಅಧಿಕೃತ ಎಂದು ತಿಳಿದು ಈ ಹಿಂದಿನಂತೆ ಸಹಕರಿಸಲು ಕೋರಿಕೊಳ್ಳಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ