ಅಂಕೋಲಾ: ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಗೋಕರ್ಣ ವಡ್ದೀಘಾಟ ಹೆದ್ದಾರಿ ತಿರುವಿನಲ್ಲಿ ಸಾರಿಗೆ ಸಂಸ್ಥೆಯ ಬಸ್ಸೊಂದು ಅದಾವುದೋ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯುತ್ತಾ ತಗ್ಗು ಪ್ರದೇಶದಲ್ಲಿ ಉರುಳಿದ ಘಟನೆ ಶನಿವಾರ ಸಂಭವಿಸಿದೆ.
ಶಿರಸಿ ಕಡೆಯಿಂದ ಕುಮಟಾ ಕಡೆ ಹೋಗುತ್ತಿದ್ದ ಕೆ.ಎ 31/ ಎಫ್ 1630 ನೊಂದಣಿ ಸಂಖ್ಯೆಯ ಬಸ್ ಇದಾಗಿದ್ದು, ಅಂಕೋಲಾ ತಾಲೂಕಿನ ಅಚವೆ ಗ್ರಾಮ ವ್ಯಾಪ್ತಿಯ ವಡ್ಡೀಘಾಟ್ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ಈ ರಸ್ತೆ ಅವಘಡದಿಂದ ಬಸ್ಸಿನಲ್ಲಿದ್ದ 45 ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಹಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹಲವು ಗಾಯಾಳುಗಳನ್ನು ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಅದೃಷ್ಟವಶಾತ್ ಚಾಲಕ -ನಿರ್ವಾಹಕ , ಮತ್ತು ಪ್ರಯಾಣಿಕರೆಲ್ಲರೂ ಸಂಭವನೀಯ ಭಾರೀ ಅಪಾಯ ಮತ್ತು ಅನಾಹುತದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಕುಮಟಾ ಘಟಕಕ್ಕೆ ಸೇರಿದ ಈ ಬಸ್ಸು, ಬಳ್ಳಾರಿಯಿಂದ ಶಿರಸಿ ಮಾರ್ಗವಾಗಿ ವಡ್ಡೀಘಾಟ ಬಳಿ ಸಂಚರಿಸುತ್ತಿರುವಾಗ ಆಕಸ್ಮಿಕ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು , ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತದ ಘಟನೆ ಕುರಿತಂತೆ ಮತ್ತಷ್ಟು ಹೆಚ್ಚಿನ ಹಾಗೂ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.
ಬಸ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದಲೇ ಈ ಅಪಘಾತ ಸಂಭವಿಸಿದ್ದು ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಏರ್ಪೋರ್ಟ್ ಮೆನೇಜರ್ ವೃತ್ತಿಯ , ಹೊನ್ನಾವರ ಅರೆ ಯಂಗಡಿ – ನೀಲಕೋಡ ನಿವಾಸಿ ದೀಪಕ ಉಲ್ಲಾಸ್ ಕಾಮತ್ ಎನ್ನುವವರು , ಬಸ್ ಅಪಘಾತದಿಂದ ಗಾಯಗೊಂಡ ಬಳಿಕ ಕುಮಟಾ ತಾಲೂಕು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದು, ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತನ್ನ ಹೆಂಡತಿ ನಾಗರತ್ನ, ಮಗ ವಿಠೋಬ, ಸಹಪ್ರಯಾಣಿಕರಾದ ನಾಗರಾಜ ಕಾನಡೆ, ಕಾವೇರಿ ಅಂಗಡಿ, ಈರಪ್ಪ ಅಂಗಡಿ ಅವರಿಗೂ ಗಾಯ ನೋವುಗಳಾದ ಕುರಿತು ಉಲ್ಲೇಖಿಸಿ ಪೊಲೀಸ್ ದೂರು ನೀಡಿದ್ದು, ಬಸ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ