ಅಂಕೋಲಾ: ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈ ಬಿಟ್ಟು,ಮೀನುಗಾರರ ಹಿತರಕ್ಷಣೆಗೆ ಸರ್ಕಾರ ಸ್ಪಂದಿಸುವಂತೆ ಬೆಳಂಬಾರದ ಮೀನುಗಾರರು ಮತ್ತು ನಾಡ ದೋಣಿ ಸಂಘದವರು ಸ್ಥಳೀಯ ಯುವ ಪ್ರಮುಖ ಸುಂದರ ಖಾರ್ವಿ ನೇತೃತ್ವದಲ್ಲಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಂಕೋಲಾ ತಾಲೂಕು ಮತ್ತು ಸುತ್ತ ಮುತ್ತಲಿನ ಮೀನುಗಾರರಿಗೆ ಕೇಣಿ ಭಾಗದ ಕಡಲ ಪ್ರದೇಶ ಜೀವಾಳವಾಗಿದ್ದು ಆ ಭಾಗದಲ್ಲಿ ಮೀನುಗಾರಿಕೆ ನಡೆಸಿ ಜೀವನ ನಿರ್ವಹಣೆ ಮಾಡಲಾಗುತ್ತಿದೆ, ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರರ ಜೀವನಾಧಾರ ಸಂಪೂರ್ಣವಾಗಿ ನಿಂತು ಹೋಗಲಿದ್ದು ಬದುಕು ಸರ್ವನಾಶವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ನೈಸರ್ಗಿಕ ಸಮುದ್ರ ಪ್ರದೇಶವನ್ನು ಬಂದರು ನಿರ್ಮಾಣಕ್ಕೆ ಬಳಸುವದರಿಂದ ಮತ್ತು ಉಬ್ಬರ ಇಳಿತಕ್ಕೆ ಅಡ್ಡವಾಗಿ ತಡೆ ಉಂಟಾಗುವುದರಿಂದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಡಲ ತೀರಗಳು ಕೊಚ್ಚಿ ಹೋಗುವ ಆತಂಕವಿದೆ ಅಲೆಗಳ ಅಬ್ಬರ ಹೆಚ್ಚಿ ಮೀನುಗಾರರ ಮನೆ ಶೆಡ್ಡುಗಳು ಕಡಲ ಒಡಲು ಸೇರುವ ಸಾಧ್ಯತೆ ಇದೆ, ಎಂದು ಮನವಿಯಲ್ಲಿ ಅಳಲನ್ನು ತೋಡಿಕೊಳ್ಳಲಾಗಿದೆ.
ಈಗಾಗಲೇ ನೌಕಾನೆಲೆ ಮತ್ತಿತರ ಯೋಜನೆಗಳಿಂದಾಗಿ ಮೀನುಗಾರರು ಮೀನುಗಾರಿಕೆ ಪ್ರದೇಶಗಳನ್ನು ಕಳೆದುಕೊಂಡು ತೀವ್ರ ಸಂಕಟದಲ್ಲಿದ್ದು ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರ ಸಮಸ್ಯೆಗಳು ಹೆಚ್ಚಿಲಿವೆ, ಕರಾವಳಿ ಜನರ ಸಾಂಪ್ರದಾಯಿಕ ಕಸುಬುಗಳಾದ ಕೃಷಿ ಮತ್ತು ಮೀನುಗಾರಿಕೆಯನ್ನು ಬಲಿ ಪಡೆಯುವ ವಾಣಿಜ್ಯ ಬಂದರು ಯೋಜನೆ ಕೈ ಬಿಟ್ಟು ಪ್ರವಾಸೋದ್ಯಮದ ಬೆಳವಣಿಗೆಗೆ ಮಹತ್ವ ನೀಡಿ ಅಭಿವೃದ್ಧಿ ಕೆಲಸಗಳು ನಡೆಯಲಿ.
ಅಲ್ಲದೇ ಮೀನುಗಾರರ ಹಿತ ದೃಷ್ಟಿಯಿಂದ ಲೈಫ್ ಜಾಕೆಟ್ ಸೇರಿದಂತೆ ಪೂರಕ ವ್ಯವಸ್ಥೆಗಳನ್ನು ಮಾಡಿ, ಸಾಂಪ್ರದಾಯಿಕ ಮೀನುಗಾರಿಕೆಗೆ ಯಾವುದೇ ರೀತಿ ಕುತ್ತು ಬಾರದಂತೆ ,ಸಮುದ್ರ ಮತ್ತು ಸಮುದ್ರ ತೀರವನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ನಿರಂತರವಾಗಿ ಹೋರಾಟ ಮುಂದುವರಿಸಬೇಕಾದೀತು ಎಂದು ಸುಂದರ ಖಾರ್ವಿ ಮನವಿ ಓದುವಾಗ ತಿಳಿಸಿದರು. ತಹಶೀಲ್ದಾರ ಡಾ ಚಿಕ್ಕಪ್ಪ ನಾಯಕ ಮನವಿ ಸ್ವೀಕರಿಸಿದರು. ಬೆಳಂಬಾರದ ಮೀನುಗಾರರ ಪ್ರಮುಖರಾದ ಪ್ರಭಾಕರ್ ಖಾರ್ವಿ, ಮಧುಕರ್ ಖಾರ್ವಿ, ಅಮಿತ್ ಖಾರ್ವಿ, ಕಮಲಕರ್ ಖಾರ್ವಿ ರೋಷನ್ ಖಾರ್ವಿ ದಿಲೀಪ್, ನಾಗರಾಜ ಖಾರ್ವಿ, ಮಂಜು ಖಾರ್ವಿ, ಗ್ರಾಪಂ ಉಪಾಧ್ಯಕ್ಷ ಜಗದೀಶ ಖಾರ್ವಿ ಮತ್ತಿತರರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ