ಅಂಕೋಲಾ : ತಾಲೂಕಿನ ಶಿರೂರು ಗ್ರಾಮದಲ್ಲಿ ನಾಮಧಾರಿ ಸಮಾಜಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವ ಬಗ್ಗೆ, ಸ್ಥಳೀಯ
ನವಚೈತನ್ಯ ನಾಮಧಾರಿ ಸಂಘದವರು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಶಿರೂರು ಗ್ರಾಮದಲ್ಲಿ ವಾಸಿಸುತ್ತಿರುವ ನಮ್ಮ ನಾಮಧಾರಿ ಸಮಾಜದ ಜನರು, ಚತುಷ್ಪಥ ಹೆದ್ದಾರಿ ಅಗಲೀಕರಣದ ಕಾಮಗಾರಿಯ ಕಾರಣದಿಂದಾಗಿ ಅನಾದಿಕಾಲದಿಂದ ಇದ್ದ ಸ್ಮಶಾನ ಭೂಮಿಯನ್ನು ಕಳೆದುಕೊಳ್ಳುವಂತಾಗಿತ್ತು. ಇದರಿಂದಾಗಿ, ದುರದೃಷ್ಟವಶಾತ್, ನಮ್ಮ ಗ್ರಾಮದಲ್ಲಿ ಯಾರಾದರೂ ನಿಧನರಾದಲ್ಲಿ ಅಂತ್ಯಸಂಸ್ಕಾರ ಮಾಡಲು ಸೂಕ್ತ ಸ್ಥಳವಿಲ್ಲದೆ ನಾವು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ.
ಈ ಸಮಸ್ಯೆಯ ಗಂಭೀರತೆಯನ್ನು ಮನಗಂಡು, ನಾವು ಈ ಹಿಂದೆ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೆವು. ಅದರ ಪರಿಣಾಮವಾಗಿ, ತಮ್ಮ ಕಂದಾಯ ಇಲಾಖೆಯಿಂದ ರಸ್ತೆ ಬದಿಯ ಜಾಗವೊಂದನ್ನು ಸ್ಮಶಾನಕ್ಕಾಗಿ ಮೀಸಲಿಡಲು ಪಂಚನಾಮೆ ಕಾರ್ಯವನ್ನು ನಡೆಸಲಾಗಿದೆಯಾದರೂ, ಅದಾಗಿ ಸಾಕಷ್ಟು ಸಮಯ ಕಳೆದರೂ, ಈ ಜಾಗವನ್ನು ಇದುವರೆಗೂ ಅಧಿಕೃತವಾಗಿ ಸ್ಮಶಾನಕ್ಕೆ ಮಂಜೂರು ಮಾಡಿಲ್ಲ. ನಮ್ಮ ಸಮಾಜದ ಜನರು ತಮ್ಮ ಪ್ರೀತಿಪಾತ್ರರ ಅಂತ್ಯಸಂಸ್ಕಾರಕ್ಕೆ ಸೂಕ್ತ ಸ್ಥಳವಿಲ್ಲದೆ ಪ್ರತಿನಿತ್ಯ ತಳಮಳಗೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ದೊರಕಿಸಿಕೊಡಬೇಕೆನ್ನುವುದು ನಮ್ಮೆಲ್ಲರ ಆಶಯ ಮತ್ತು ಆಗ್ರಹವಾಗಿದೆ.
ಎಂದು ನವಚೈತನ್ಯ ನಾಮಧಾರಿ ಸಂಘದ ಪರವಾಗಿ ಮತ್ತು ಶಿರೂರು ಗ್ರಾಮದ ನಾಮಧಾರಿ ಸಮಾಜದ ಪರವಾಗಿ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ. ಸಂಘದ ಅಧ್ಯಕ್ಷ ನಾಗರಾಜ ನಾಯ್ಕ, ಉಪಾಧ್ಯಕ್ಷ ಅಭಿಷೇಕ್ ನಾಯ್ಕ, ಕಾರ್ಯದರ್ಶಿ ರಘುನಾಥ ನಾಯ್ಕ,ಸದಸ್ಯರುಗಳಾದ ದಿಲೀಪ್ ನಾಯ್ಕ್, ಸೂರಜ್ ನಾಯ್ಕ, ಅರುಣ್ ನಾಯ್ಕ್ , ಮಹಾಬಲೇಶ್ವರ ನಾಯ್ಕ ಉಪಸ್ಥಿತರಿದ್ದರು. ಉಪ ತಹಶೀಲ್ದಾರ ಗಿರೀಶ ಜಾಂಬಾವಳಿಕರ ಮನವಿ ಸ್ವೀಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ