ಅಂಕೋಲಾ: ಖಾಸಗಿ ಸಹ ಭಾಗಿತ್ವದಲ್ಲಿ ಅಂಕೋಲಾದಲ್ಲಿ ಕೇಣಿ ಗ್ರೀನ್ ಫೀಲ್ಡ್ ಬೃಹತ್ತ್ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಿದ್ಧತೆಗಳು ಮತ್ತಷ್ಟು ಹೆಚ್ಚಾಗುತ್ತಿರುವ ನಡುವೆ ಸ್ಥಳೀಯ ಮೀನುಗಾರರ ನೇತೃತ್ವದ ಬಂದರು ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ಕೇಣಿ ಕಡಲ ತೀರದಿಂದ ಮೀನುಗಾರ ಮಹಿಳೆಯರೂ ಸೇರಿದಂತೆ ಸಾವಿರಾರು ಜನ ಪ್ರತಿಭಟನಾಕಾರರು ಸುರಿವ ಮಳೆಯನ್ನೂ ಲೆಕ್ಕಿಸದೇ 4-5 ಕಿ.ಮೀ ದೂರದ ವರೆಗೆ ಪಾದಯಾತ್ರೆ ನಡೆಸಿದರು.
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗುತ್ತ,ತಹಶೀಲ್ಧಾರರ ಕಾರ್ಯಾಲಯದ ಅವರಣದ ವರೆಗೆ ಬಂದು ವಾಣಿಜ್ಯ ಬಂದರು ನಿರ್ಮಾಣ ಯೋಜನೆ ಕುರಿತಂತೆ ತಮ್ಮ ಅಸಮಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು.
ಮೀನು ಮಾರಾಟ ಮಾಡುವ ಬುಟ್ಟಿಯ ಮಾದರಿಯಲ್ಲಿ ನೂರಾರು ಮನವಿ ಪತ್ರದ ಪ್ರತಿಗಳನ್ನು ತುಂಬಿ ತಂದ ಕೆಲ ಮಹಿಳೆಯರು ಮತ್ತು ಹೆಗಲ ಮೇಲೆ ಮತ್ತು ಕೈಯಲ್ಲಿ ಬಲೆ ಹಿಡಿದು ಸಾಂಪ್ರದಾಯಿಕ ಮೀನುಗಾರರ ಶೈಲಿಯಲ್ಲಿಯೇ ಕಾಣಿಸಿಕೊಂಡ ಹಿಯರೊಬ್ಬರು, ತಮ್ಮ ಕುಲ ಕಸುಬಾದ ಮೀನುಗಾರಿಕೆಯೇ ಜೀವಾಳ ಎಂಬoತೆ ಸಾಂಕೇತಿಕವಾಗಿ ಪ್ರದರ್ಶಿಸಿ, ಗಮನ ಸೆಳೆದರು. ಬಂದರು ವಿರೋಧಿ ಹೋರಾಟ ಸಮಿತಿ ಪ್ರಮುಖರು ಮತ್ತು ಸ್ಥಳೀಯರು ಸೇರಿ ಮನವಿ ತುಂಬಿರುವ ಬುಟ್ಟಿಗಳನ್ಪು ತಹಶೀಲ್ಧಾರರಿಗೆ ನೀಡುವ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ ಅಳಲು ತಿಳಿಸುವಂತೆ ವಿನಂತಿಸಿದರು.
ಜಿಲ್ಲಾ ಮೀನುಗಾರ ಸಂಘಟನೆ ಪ್ರಮುಖ ಮತ್ತು ಎಂ ಎಲ್ ಸಿ ಗಣಪತಿ ಉಳ್ವೇಕರ ಈ ಸಂದರ್ಭದಲ್ಲಿ ಮಾತನಾಡಿ, ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಕೇವಲ ಕೇಣಿಯ ಮೀನುಗಾರರು ಮಾತ್ರವಲ್ಲದೇ ಸುತ್ತ ಮುತ್ತಲಿನ ಎಲ್ಲಾ ಭಾಗಗಳಲ್ಲಿ ಮೀನುಗಾರರು ತೊಂದರೆ ಅನುಭವಿಸಲಿದ್ದಾರೆ ಈ ಯೋಜನೆಯಿಂದ ಕೃಷಿ ಸೇರಿದಂತೆ ಇತರ ಜನ ಮತ್ತು ಜೀವನಕ್ಕೆ ಸಾಕಷ್ಟು ಸಮಸ್ಯೆ ಆಗಲಿದೆ ಎಂದರು.
ಕಾರವಾರ ಮತ್ತು ಬೆಲೇಕೇರಿಗಳಲ್ಲಿ ಬಂದರುಗಳು ವ್ಯವಹಾರ ನಡೆಯದೇ ಖಾಲಿ ಬಿದ್ದಿವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇರುವ ಬಂದರುಗಳನ್ನು ಅಭಿವೃದ್ಧಿ ಪಡಿಸುವುದನ್ನು ಬಿಟ್ಟು ಸಾವಿರಾರು ಕೋಟಿಗಳ ಹೊಸ ಬಂದರು ನಿರ್ಮಾಣಕ್ಕೆ ಯಾಕೆ ಮುಂದಾಗಿವೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದ ಅವರು ಕೇಣಿ ಬಂದರು ಯೋಜನೆಯನ್ನು ಸಮಸ್ತ ಮೀನುಗಾರರು ಮತ್ತು ಸುತ್ತ ಮುತ್ತಲಿನ ಜನರು ವಿರೋಧಿಸಬೇಕು ಎಂದರು.
ಕಾoಗ್ರೆಸ್ ಪಕ್ಷದ ಯುವ ಮುಖಂಡ ಗೋಪಾಲಕೃಷ್ಣ ನಾಯಕ ಮಾತನಾಡಿ ವಾಣಿಜ್ಯ ಬಂದರು ನಿರ್ಮಾಣ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಮೀನುಗಾರರು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಯೋಜನೆ ಕುರಿತಂತೆ ಇರುವ ಸ್ಥಳೀಯರ ವಿರೋಧವನ್ನು ಸರ್ಕಾರ ಪರಿಗಣಿಸಬೇಕು. ಇಲ್ಲದಿದ್ದರೆ ಹೋರಾಟಗಾರರ ಸಮಾಧಿಯ ಮೇಲೆ ಬಂದರು ನಿರ್ಮಾಣ ಮಾಡಬೇಕಾಗುತ್ತದೆ ಎಂದರು.
ತಹಶೀಲ್ಧಾರ ಡಾ.ಚಿಕ್ಕಪ್ಪ ನಾಯಕ ಮನವಿ ಸ್ವೀಕರಿಸಿ, ನಿಮ್ಮ ಜಿಲ್ಲಾಧಿಕಾರಿಗಳ ಮೂಲಕ ತಮ್ಮ ಮನವಿಯಂತೆ, ಇಲ್ಲಿ ತಾವು ಹೇಳಿದ ಮುಖ್ಯಾಂಶಗಳನ್ನು ಮುಖ್ಯಮಂತಿಗಳ ಗಮನಕ್ಕೆ ತರಲಾಗುವುದು ಎಂದರು. ಕೇಣಿ ಬಂದರು ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಾರವಾಡದಿಂದ ಮಂಜಗುಣಿ ವರೆಗಿನ ತಾಲೂಕು ವ್ಯಾಪ್ತಿಯ ಕೆಲ ಮೀಮಗಾರ ಮುಖಂಡರು, ಸ್ಥಳೀಯರು, ಕೆಲ ಸಂಘ ಸಂಸ್ಥೆಗಳ ಪ್ರಮುಖರು , ಹಾಲಿ ಹಾಗೂ ಮಾಜಿ ಜನಪ್ರತಿನಿದಿಗಳು, ವಿವಿಧ ಸಮಾಜ ಹಾಗೂ ಬೇರೆ ಬೇರೆ ಊರಿನ ಪ್ರಮುಖರು , ನಾಗರಿಕರು ಸೇರಿ ಸಾವಿರಾರು ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ, ಜಿಲ್ಲಾ ಕೇಂದ್ರ ಕಾರವಾರದ ವಿಶೇಷ ಸಭೆಗೆ ತೆರಳುತ್ತಿದ್ದ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ವಂದಿಗೆ ಬಳಿ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಭೇಟಿಯಾದ ಕೆಲ ಪ್ರಮುಖರು ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಸಚಿವರಿಗೆ ಮನವಿ ಸಲ್ಲಿಸಿದರು.
ಕಂದಾಯ ಸಚಿವರು ತಮ್ಮ ವಾಹನದಿಂದ ಕೆಳಗೆ ಇಳಿದು ಸ್ಥಳೀಯರ ಮನವಿ ಸ್ವೀಕರಿಸಿದರೂ, ಅದೇ ಕಾರಿನಲ್ಲಿ ಸಚಿವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಮೀನುಗಾರ ಸಮುದಾಯದವರೇ ಆಗಿರುವ ಮೀನುಗಾರಿಕೆ ಮತ್ತು ಬಂದರು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರಿನಿಂದ ಕೆಳಗಿಳಿದು ಬಂದು ತಮ್ಮ ಸಮಸ್ಯೆ ಆಲಿಸಲು ಬಾರದಿರುವುದು ಸ್ಥಳೀಯ ಕೆಲ ಮೀನುಗಾರ ಮುಖಂಡರ ಹಾಗೂ ಯುವಕರಲ್ಲಿ ನಿರಾಸೆ ಮೂಡಿಸಿದಂತಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ