ಕುಮಟಾ: ಕುಮಟಾದಿಂದ ಸಿದ್ದಾಪುರಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿನ ಬಡಾಳದಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆ ಬಳಿಯ ರಸ್ತೆ ಕಾಮಗಾರಿಯು ಅಪೂರ್ಣವಾಗಿದೆ. ಇಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲದ ಸಂದರ್ಭದಲ್ಲಿ ಎರಡು ಸಾರಿ ಊರಿನ ಯುವಕರು ಸೇರಿ ಈ ರಸ್ತೆಯ ದುರಸ್ತಿ ಕಾರ್ಯ ಮಾಡಿದ್ದರು.
ಆದರೆ ಇದೀಗ ಸಂಪೂರ್ಣ ಹಾಳಾಗಿರುವುದರಿಂದ ಸಂಬoಧಪಟ್ಟ ಪಿಡಬ್ಲೂ ಇಲಾಖೆಗೆ ಸತತವಾಗಿ ವಿನಂತಿ ಮಾಡಿದ್ದರೂ ಸಹ ಯಾವುದೇ ಸಕಾರಾತ್ಮಕ ಉತ್ತರವಾಗಲೀ ಅಥವಾ ಕೆಲಸ ಮಾಡಿಸುವುದಾಗಲೀ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ಈ ರಸ್ತೆಯಲ್ಲಿ ಸಂಚಾರ ಮಾಡಿದ 4 ರಿಂದ 5 ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಹಾಗೂ ಲಘು ವಾಹನಗಳ ಬಂಪರ್ ಕಿತ್ತು ಹೋಗಿದೆ. ಈ ರಸ್ತೆಯಲ್ಲಿ ಯಾವುದೇ ಬ್ಯಾರಿಕೇಡ್ ಹಾಗೂ ಸೂಚನಾ ಫಲಕ ಇಲ್ಲದಿರುವುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ