ಅಂಕೋಲಾ: ತಾಲೂಕಿನ ಸಂಸ್ಕೃತಿಯ ಆರಾಧನಾ ಪದ್ಧತಿಯಾಗಿ ಹಲವು ತಲೆಮಾರುಗಳಿಂದ ಆಚರಿಸಲ್ಪಡುತ್ತ
ಬಂದಿರುವ ಪಂಚ ದೇವರುಗಳ ದೊಡ್ಡ ಕಾರ್ತಿಕೋತ್ಸವ ಮತ್ತು ವನಭೋಜನ ಮಹೋತ್ಸವ ಈ ಬಾರಿ ನವೆಂಬರ್ 7ರ ಶುಕ್ರವಾರ (ಇಂದು), ಮತ್ತು 8 ರ ಶನಿವಾರ ನಡೆಯಲಿದ್ದು ಅನಾದಿಕಾಲದಿಂದ ಬಾಳೆಗುಳಿಯ ಹಳ್ಳದ ಸಮೀಪ ನಡೆಯುತ್ತ ಬಂದಿರುವ ವನಭೋಜನ ಈ ಬಾರಿ ಶಿರಕುಳಿಯ ಶ್ರೀಶಾಂತಾದುರ್ಗಾ ದೇವಿಯ ಮೂಲ ಸ್ಥಾನ ಕಾನದೇವಿ ದೇವಾಲಯದ ಸಮೀಪ ಇರುವ ವಿಶಾಲ ಬಯಲು ಪ್ರದೇಶದಲ್ಲಿ ನಡೆಯಲಿದೆ.
ಅಂಕೋಲೆಯ ದೊಡ್ಡ ಕಾರ್ತಿಕ ಉತ್ಸವದ ಪ್ರಯುಕ್ತ ತಾಲೂಕಿನ ದೊಡ್ಡ ದೇವರು ಖ್ಯಾತಿಯ ವೆಂಕಟರಮಣ, ಶಕ್ತಿದೇವತೆ ಶ್ರೀಶಾಂತಾದುರ್ಗಾ, ಹನುಮಟ್ಟದ ಶಕ್ತಿ ದೇವತೆ ಶ್ರೀ ಆರ್ಯಾದುರ್ಗಾ, ಅಂಬಾರಕೊಡ್ಲ ಮುಖ್ಯ ರಸ್ತೆ ಅಂಚಿಗೆ ಇರುವ ಶ್ರೀ ನಾರಾಯಣ ದೇವರು ಮತ್ತು ಹೊನ್ನಿಕೇರಿಯ ಶ್ರಿಮಹಾದೇವರ ಪಲ್ಲಕಿಗಳು ಬಾಳೆಗುಳಿಯ ವನ ಪ್ರದೇಶಕ್ಕೆ ತೆರಳಿ ಅಲ್ಲಿ ವನಭೋಜನ ನಡೆಸಿ ರಾತ್ರಿ ವನ ಪ್ರದೇಶದಿಂದ ಮರಳಿ ಬರುತ್ತಿದ್ದವು.
ಇದೀಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಮತ್ತಿತರ ಕಾರಣದಿಂದ ವನ ಭೋಜನ ನಡೆಯುವ ಸ್ಥಳದಂಚಿಗೆ ಕಲ್ಲು ಮಣ್ಣುಗಳು ತುಂಬಿ ರುವದು, ಇಕ್ಕಟ್ಟಾದ ಸ್ಥಳ ಮತ್ತಿತರ ಕಾರಣ ದೇವರಲ್ಲಿ ಪ್ರಸಾದ ಹಚ್ಚಿ ಶಿರಕುಳಿಯ ಶ್ರೀಕಾನದೇವಿಯ ದೇವಾಲಯದ ಸಮೀಪ ಇರುವ ದೇವಾಲಯದ ಜಾಗದಲ್ಲಿ ವನಭೋಜನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಇತ್ತೀಚೆಗೆ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಯ ಪ್ರಮುಖರು ,ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ, ಸರ್ವಭಕ್ತರ ಸಹಕಾರ ಕೋರಿದ್ದರು.
ನವಂಬರ 7 ರಂದು ಸಂಜೆ ಐದು ದೇವರ ಪಲ್ಲಕಿಗಳು ಸೇರಿ ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿರುವ ನಾರಾಯಣ ದೇವಾಲಯದ ಮೂಲಕ ಅಂಬಾರಕೊಡ್ಲ -ಶಿರಕುಳಿ ಮಾರ್ಗವಾಗಿ ವನಭೋಜನಕ್ಕೆ ನೂತನವಾಗಿ ಸಿದ್ಧಗೊಂಡ, ಶ್ರೀಕಾನ ದೇವಿ ದೇವಸ್ಥಾನದ ಹತ್ತಿರದ ವಿಶಾಲ ಬಯಲು ಪ್ರದೇಶಕ್ಕೆ ತೆರಳಲಿದ್ದು ,ಅಲ್ಲಿ ವಿರಾಜಮಾನವಾಗಿ ಕುಳಿತು, ಭಕ್ತರ ಆರತಿ ಸೇವೆ ಪೂಜೆ ಸ್ವೀಕರಿಸುವ ಮತ್ತು
ವನಭೋಜನ ವಿಧಿ ವಿಧಾನಗಳು ನಡೆಯಲಿವೆ.
ಮೊದಲ ಬಾರಿಗೆ ತಮ್ಮ ಊರಿಗೆ ಬರುವ ಪಂಚ ದೇವರುಗಳ ಸ್ವಾಗತಕ್ಕೆ ಶಿರಕುಳಿಯ ಜನರು ಕಾತುರರಾಗಿರುವುದು ಒಂದೆಡೆಯಾದರೆ, ವರ್ಷಂಪ್ರತಿಯಂತೆ ದಾರಿ ಉದ್ದಕ್ಕೂ ಆಕರ್ಷಕ ರಂಗೋಲಿ ಚಿತ್ತಾರ,ಸ್ವಾಗತ ಕಮಾನುಗಳು, ವಿದ್ಯುತ್ತ ದೀಪಾಲಂಕಾರ ಹಬ್ಬದ ಕಳೆಯನ್ನು ಹೆಚ್ಚಿಸಲಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಭಕ್ತರು ಆಗಮಿಸಿ ವನಭೋಜನ ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.
ರಾತ್ರಿ ಶಿರಕುಳಿಯಿಂದ ಮರಳುವ ದೇವರ ಪಲ್ಲಕಿಗಳು ಅಂಬಾರಕೊಡ್ಲದ ಬಳಿ ದಲಿತರ ಕೇರಿಯಲ್ಲಿ ಕಡಕಿ ಹಾಸೆಯ ಮೇಲಿಂದ ಹಾದು ಹೋಗುವ ವಿಶಿಷ್ಟ ಸಂಪ್ರದಾಯ ನಡೆಯಲಿದ್ದು,ನವಂಬರ 8 ರಂದು ನಸುಕಿನಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಸರ್ವಾಲಂಕಾರದ
ರಥದಲ್ಲಿ ಇರಿಸಿ ಶ್ರೀವೆಂಕಟರಮಣ ದೇವಾಲಯದಿಂದ ಶ್ರೀಶಾಂತಾದುರ್ಗಾ ದೇವಾಲಯದ ವರೆಗೆ ಐದು ರಥಗಳ ಮೆರವಣಿಗೆ
ನಡೆಯಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಕಾರ್ತಿಕೋತ್ಸವ ವಿದ್ಯುತ್ ದೀಪಾಲಂಕಾರ, ರಂಗೋಲಿ, ವಿವಿಧ ಬಗೆಯ ತೋರಣಗಳ ವೈಭವ ಕಣ್ತುಂಬಿಸಿಕೊಳ್ಳಲೆಂದೇ ,ತಾಲೂಕು ಹಾಗೂ ದೇಶ ವಿದೇಶಗಳಲ್ಲಿ ನೆಲೆಸಿರುವ ಹಲವು ಭಕ್ತರು ಈ ವಿಶೇಷ ಉತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಮೆರೆಯಲಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ













