ಅಂಕೋಲಾ : ಕೃತಕ ಬುದ್ಧಿಮತ್ತೆಯು ( AI ತಂತ್ರಜ್ಞಾನ ) ತ್ವರಿತವಾಗಿ ಮಾಹಿತಿ ಪಡೆಯುವ ಹೊಸತನದ ಆವಿಷ್ಕಾರವಾಗಿದೆ. ಎ ಐ ನ ಉಪಕ್ರಮಗಳೇ ನಮ್ಮನ್ನು ಮುಂದೆ ಆಳಲಿವೆ ಎಂದು ಕೃತಕ ಬುದ್ಧಿಮತ್ತೆಯ ಮಾಸ್ಟರ್ ತರಬೇತುದಾರ್ತಿ ಸುನೀತಾ ಪಟಗಾರ ಹೇಳಿದರು.
ಪಟ್ಟಣದ ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನರಿಗೆ ಹೊಸ ಕೌಶಲ್ಯ ಉನ್ನತಗೊಳಿಸಲು ಮತ್ತು ವೃತ್ತಿ ಆಯ್ಕೆಗಳಿಗೆ ಸಹಾಯ ಮಾಡಲು ಹಾಗೂ ಉದ್ಯೋಗ ಸಂದರ್ಶನಗಳಿಗೆ ಸಿದ್ಧತೆಗೊಳಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ತರಬೇತಿಯಲ್ಲಿ ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶ ಮತ್ತು ಜನರೇಟಿವ್ ಎಐ ಪರಿಕರಗಳು, ಎಐ ಪ್ರಾಂಪ್ಟ್ ತಂತ್ರಗಳ ಕಲಿಕೆ ಮತ್ತು ವೃತ್ತಿ ಜೀವನದ ಅನ್ವೇಷಣೆಗಳಲ್ಲಿ ಜನರೇಟಿವ್ ಎಐ ಅನ್ನು ಹೇಗೆ ಬಳಸಬೇಕು ಎಂಬುದನ್ನು ಆ್ಯಪ್‌ಗಳಾದ ಚಾಟ್ ಜಿಪಿಟಿ, ಜೆಮಿನಿ ಮೈಕ್ರೋಸಾಪ್ಟ್ ಸುನೋ ಆ್ಯಪ್‌ಗಳ ಬಳಕೆ ಮಾಡಿಕೊಂಡು ೪ ಅಧಿವೇಶನಗಳಲ್ಲಿ ಹಂತ ಹಂತವಾಗಿ ತರಬೇತಿಗೊಳಿಸಲಾಗುತ್ತದೆ.
ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ ಮಾತನಾಡಿ, ಉದ್ಯೋಗ ಸಿಗಲು ಕೌಶಲ್ಯವನ್ನು ಹೊಂದಲು ಪೂರಕವಾಗಿ ನಮ್ಮ ಕೆಎಲ್‌ಇ ಸಂಸ್ಥೆಯು ವಿವಿಧ ತರಬೇತಿಗಳನ್ನು ನಡೆಸುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಡೆಲ್ ಕಂಪನಿ ಹಾಗೂ ಶಿಕ್ಷಣ ಪೌಂಡೇಶನ್ ಹಾಗೂ ಕೆಎಲ್‌ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ತರಬೇತಿಯನ್ನು ಬಿ.ಎ. ಮತ್ತು ಬಿ.ಕಾಂ. ಅಂತಿಮ ವರ್ಷದ 40 ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ವಿಲಾಸ್ ನಾಯಕ, ಅಂಕೋಲಾ