ಕುಮಟಾ: ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಹಕ್ಕು. ಅದಕ್ಕೆ ನೀರೆರೆದು ಪ್ರೋತ್ಸಾಹಿಸುವುದು ಪಾಲಕರ ಕರ್ತವ್ಯ. ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭೆಗಳು ಸಂಸ್ಕಾರವನ್ನು ರೂಢಿಸಿ ಕೊಂಡಾಗ ಮಾತ್ರ ಆ ಪ್ರತಿಭೆಗೆ ಒಂದು ಮೌಲ್ಯ ಇರುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಿರ್ಜಾನ್ ಶಾಖಾ ಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು.
ಅವರು ಹಾಲಕ್ಕಿ ಒಕ್ಕಲಿಗರ ಸಂಘ ಕುಮಟಾ ರವರು ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನ ದೀವಗಿಯಲ್ಲಿ ಹಮ್ಮಿಕೊಂಡ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಾಲಕ್ಕಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನ್ನಾಡುತ್ತಾ ಸಮಾಜದಲ್ಲಿ ಯಾರೂ ದಡ್ಡರಲ್ಲ, ಪ್ರತಿಯೊಂದು ಮಗುವಿನಲ್ಲೂ ಜ್ಞಾನ ಇದ್ದೇ ಇರುತ್ತದೆ. ಅದನ್ನು ಬೆಳಕಿಗೆ ತರುವ ಪ್ರಯತ್ನ ಶಿಕ್ಷಕರು, ಸುತ್ತನ ಸಮಾಜ, ಪಾಲಕ ಪೋಷಕರು ಮಾಡಬೇಕು.
ಹಾಲಕ್ಕಿ ಸಮಾಜದ ಅಂತಹ ಪ್ರತಿಭೆಗಳನ್ನು ಸಂಘವು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಮತ್ತು ಅಭಿನಂದನೀಯವಾದುದು. ಇದರೊಂದಿಗೆ ಜಾನಪದ, ಸುಗ್ಗಿ ಕುಣಿತ, ನಾಟಿ ವೈದ್ಯ ಪದ್ಧತಿಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿರುವುದು ಸಮಾಜದ ಬಗ್ಗೆ ಹೊಂದಿರುವ ಕಳಕಳಿ , ಕಾಳಜಿಯನ್ನು ಅನಾವರಣಗೊಳಿಸಿದೆ. ಪುರಸ್ಕಾರ ಸ್ವೀಕರಿಸಿದ ಪ್ರತಿಭೆಗಳು ಭವಿಷ್ಯದಲ್ಲಿ ಅದನ್ನು ಸಮಾಜಕ್ಕೆ ಹಿಂತಿರುಗಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮುಂದಿನ ಪೀಳಿಗೆಗೆ ಅದು ಮಾದರಿಯಾಗುತ್ತದೆ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಾಸಕ ದಿನಕರ ಶೆಟ್ಟಿಯವರು ಆಗಮಿಕಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಅಧ್ಯಕ್ಷ ಗೋವಿಂದ ಗೌಡರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಗ್ಗಿ ಕುಣಿತ ಕಲಾವಿದ ಗಣಪು ಬಡವಾ ಗೌಡ, ನಾಟಿ ವೈದ್ಯ ಸುಗ್ಗಿ ಕುಪ್ಪು ಗೌಡ, ಜಾನಪದ ಕಲಾವಿದೆ ಸೋಮ ಗಣಪು ಗೌಡ ರನ್ನು ಸನ್ಮಾನಿಸಲಾಯಿತು. 72 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಅಶೋಕ್ ಗೌಡ, ಹೊನ್ನಾವರ ಪದವಿ ಪೂರ್ವ ಕಾಲೇಜು , ಪ್ರಾಂಶುಪಾಲ ರವಿ ಗೌಡ, ಹಾಲಕ್ಕಿ ನೌಕರ ಸಂಘದ ಅಧ್ಯಕ್ಷ ಜಂಗಾ ಗೌಡ, , ಹೊನ್ನಾವರ ಪಟ್ಟಣ ಪಂಚಾಯತ್ ಸದಸ್ಯ ಸುಬ್ರಾಯ ಗೌಡ ಉಪಸ್ಥಿತರಿದ್ದರು. ಶ್ರೀಧರ್ ಗೌಡ ಸ್ವಾಗತಿಸಿದರು.
ವಿಸ್ಮಯ ನ್ಯುಸ್, ಕುಮಟಾ