ಕುಮಟಾ: 2023-24 ನೇ ಸಾಲಿನ ಆಯವ್ಯಯ ಘೋಷಣೆಯಂತೆ ಸಾಮಾನ್ಯ ಯೋಜನೆಯಡಿ ಕರ್ನಾಟಕ ರಾಜ್ಯದ ಪಬ್ಲಿಕ್ ಶಾಲೆಗಳಿಗೆ ಕಲಿಕಾ ಸಾಮಗ್ರಿ ಹಾಗೂ ಮೂಲಭೂತ ಸೌಕರ್ಯ ಅನುದಾನದಡಿ ಕುಮಟಾ ತಾಲೂಕಿನ ಕೆ ಪಿ ಎಸ್ ನೆಲ್ಲಿಕೇರಿ ಶಾಲೆಗೆ ಅಂದಾಜು ಮೊತ್ತ 2 ಕೋಟಿ 74 ಲಕ್ಷ ರೂಪಾಯಿಗಳ ಅನುದಾನದಡಿ 15 ಕೊಠಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ವಾದ್ಯಘೋಷದ ಮೂಲಕ ಸ್ವಾಗತಿಸಲಾಯಿತು. ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಮತ್ತು ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಕೊಠಡಿ ನಿರ್ಮಾಣ ಕಾರ್ಯದ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯ ಮೇಲಿರುವ ಅತಿಥಿ ಗಣ್ಯರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಂಕಾಳ ವೈದ್ಯ ಅವರು ಈ ರಾಜ್ಯದಲ್ಲಿಯೇ 2600ಕ್ಕೂ ಅಧಿಕ ಮಕ್ಕಳಿರುವ ಸರ್ಕಾರಿ ಶಾಲೆಗಳಿಲ್ಲ ಅನ್ನಿಸುತ್ತದೆ. ಸುಮಾರು 150 ವರ್ಷಗಳ ಇತಿಹಾಸ ಇರುವ ಈ ಶಾಲೆಯು ಕುಮಟಾ ಪಟ್ಟಣದ ಮಧ್ಯೆ ಒಳ್ಳೆಯ ಜಾಗದಲ್ಲಿದೆ. ಈ ಶಾಲೆಗೆ 15 ಕೊಠಡಿ ನಿರ್ಮಾಣ ಕಾರ್ಯಕ್ಕೆ ನಮ್ಮ ಸರ್ಕಾರ 2.74 ಕೋಟಿ ರೂ ಅನುದಾನ ನೀಡಿದೆ. ಮನುಷ್ಯ ಯಾವಾಗ ಬೇಕಾದರೂ ಏನನ್ನು ಬೇಕಾದರೂ ಪಡೆಯಬಹುದು, ಆದರೆ ಶಿಕ್ಷಣವನ್ನು ಮಾತ್ರ ಆ ಸಮಯದಲ್ಲಿ ಮಾತ್ರ ಪಡೆಯಬೇಕಾಗುತ್ತದೆ ಎಂದು ಹೇಳಿದರು.
ಉಳ್ಳವರು ಅವರಿಗೆ ಬೇಕಾದ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಸಾಮಾನ್ಯ ಜನರು, ಬಡವರು ಶಿಕ್ಷಣ ಪಡೆಯಲು ಇರುವ ವ್ಯವಸ್ಥೆ ಸರ್ಕಾರಿ ಶಾಲೆಗಳು ಮಾತ್ರ. ನನ್ನ ಪ್ರಥಮ ಆದ್ಯತೆ ಶಿಕ್ಷಣಕ್ಕೆ ನೀಡುತ್ತೇನೆ. ಸೇತುವೆ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳು ಇಂದಲ್ಲಾ ನಾಳೆ ಆಗಬಹುದು ಆದರೆ ಇಂದು ಸಿಗಬೇಕಾದ ಶಿಕ್ಷಣ ಇಂದೇ ಸಿಗಬೇಕು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿ. ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಮಾತು ಸಲ್ಲದು ನಾವು ಐದು ಗ್ಯಾರಂಟಿಗೂ ದುಡ್ಡಿಟ್ಟಿದ್ದೇವೆ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ದುಡ್ಡಿಟ್ಟಿದ್ದೇವೆ, ಅಭಿವೃದ್ಧಿ ಕಾರ್ಯಗಳು ಆಗುತ್ತಿದೆ ಎಂದರು.
ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ 150 ವರ್ಷ ದಾಟಿದ ಈ ಶಾಲೆಗೆ ಈ ವರೆಗೆ 2.74 ಕೋಟಿ ರೂ ಯಾವ ಸರ್ಕಾರವೂ ನೀಡಿರಲಿಲ್ಲ. ಆದರೆ ಇಂದಿನ ಈ ಸಕಾರ ಮತ್ತು ಸಚಿವರ ಮೂಲಕ ಅನುದಾನ ದೊರೆತಿದೆ. ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಮತ್ತು ಅವರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. 2010 ರಲ್ಲಿ ನಾನು ಶಾಸಕನಾಗಿದ್ದಾಗ ಈ ಶಾಲೆಯ ಕಟ್ಟಡ ಕಟ್ಟಲು ಪುರಾತತ್ವ ಇಲಾಖೆಯ ಸಮಸ್ಯೆ ಪರಿಹರಿಸಿ ಕಟ್ಟಡ ನಿರ್ಮಿಸಿದ್ದೇವೆ. ಮಾಜೀ ಶಾಸಕರಾದ ದಿವಂಗತ ಮೋಹನ ಶೆಟ್ಟಿಯವರು ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದು ಅವರೂ ಸಹ ಇದೇ ಶಾಲೆಯಲ್ಲಿ ಕಲಿತವರು. ಮತ್ತು ನಾನೂ ಸಹ ಇದೇ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸಮಾಡಿದ್ದೇನೆ. 2 ಶಾಸಕರನ್ನೂ ಸಹ ನೀಡಿದ ಶಾಲೆ ಇದಾಗಿದೆ. ಅಲ್ಲದೇ ಈ ಶಾಲೆಯಲ್ಲಿ ಕಲಿತ ಅನೇಕ ಜನರು ಒಳ್ಳೆಯ ಅಧಿಕಾರಿಗಳಾಗಿದ್ದಾರೆ. ಈ ಶಾಲೆಯಲ್ಲಿ ಸುಮಾರು 2600 ವಿದ್ಯಾರ್ಥಿಗಳು ಎಲ್.ಕೆ.ಜಿ ಯಿಂದ ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ರತ್ನಾಕರ ನಾಯ್ಕ, ನಾಗೇಶ ನಾಯ್ಕ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ನಿತ್ಯಾನಂದ ನಾಯ್ಕ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಸಂತ ಎಲ್. ನಾಯ್ಕ ಹೊನ್ನಪ್ಪ ನಾಯಕ, ಪುರಸಭಾ ಉಪಾಧ್ಯಕ್ಷ ಮಹೇಶ ನಾಯ್ಕ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ, ಕ್ಷೇತ್ರ ಶಿಕಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ರಾಘವೇಂದ್ರ ಡಿ. ನಾಯ್ಕ, ರಾಮು ಪಿ. ಗುನಗಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಲತಾ ಎಂ. ನಾಯಕ, ಡಯಟ್ ಪ್ರಾಚಾರ್ಯರಾದ ಶಿವರಾಮ ಎಮ್.ಆರ್. ಗುತ್ತಿಗೆದಾರರಾದ ಅಣ್ಣಪ್ಪ ಶೆಟ್ಟಿ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು, ಶಾಲಾ ಶಿಕ್ಷಕರು ಮತ್ತು ವಿದ್ಯಾಥಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್ ದೀಪೇಶ್ ನಾಯ್ಕ ಕುಮಟಾ