ಕಾರವಾರ, ಸೆಪ್ಟೆಂಬರ್ 3: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಸೆಪ್ಟೆಂಬರ್ 6ರ ವರೆಗೆ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6 ರ ವರೆಗೆ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಜಿಲ್ಲೆಯ ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ, ಜಲಪಾತ ಮತ್ತು ಸಮುದ್ರ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಅದೇಶ ನೀಡಿದೆ.
ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿ ಸಮೀಪದ ಬಡಾಳದ ಹುಲಿದೇವರ ಕೊಡ್ಲ ಸಮೀಪ ಗುಡ್ಡ ಕುಸಿತ ಸಂಭವಿಸಿ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾದ ಘಟನೆ ನಡೆದಿದೆ. ಗುಡ್ಡ ಕುಸಿತವಾಗಿ ರಾಜ್ಯ ಹೆದ್ದಾರಿಯಲ್ಲಿ ಮಣ್ಣು ತುಂಬಿಕೊoಡಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರ ನಡೆಸುವಂತಾಗಿತ್ತು.
ಗುಡ್ಡದ ಮಣ್ಣು ರಸ್ತೆಯಲ್ಲಿ ಆವರಿಸಿ ಹೆದ್ದಾರಿ ಬಂದ್ ಆಗುವ ಆತಂಕ ಎದುರಾಗಿತ್ತು. ವಿಷಯ ತಿಳಿದ ತಾಲೂಕಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿದ್ದಾರೆ.
ದಟ್ಟಾರಣ್ಯ ಪ್ರದೇಶದಲ್ಲಿ ಮತ್ತೆ ಆತಂಕ
ಬಡಾಳದ ದಟ್ಟಾರಣ್ಯದಲ್ಲಿ ಗುಡ್ಡ ಕುಸಿತ ಸಂಭವಿಸಿರುವ ವಿಚಾರ ತಿಳಿದ ಬಳಿಕ ಅಲ್ಲಿಯ ಸುತ್ತಮುತ್ತ ಪ್ರದೇಶಗಳಲ್ಲಿ ಮತ್ತೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡದಿಂದ ಕಲ್ಲು-ಮಣ್ಣು ಹೆದ್ದಾರಿಯ ಮೇಲೆ ಬಂದು ಬೀಳುತ್ತಿರುವುದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ಆತಂಕಗೊoಡಿದ್ದಾರೆ.
ವಿಸ್ಮಯ ನ್ಯೂಸ್, ದೀಪೇಶ್ ನಾಯ್ಕ, ಕುಮಟಾ