ಅಂಕೋಲಾ, ಸೆಪ್ಟೆಂಬರ್ 3: ಹೊಂಡ ಗುಂಡಿಗಳ ಹೆದ್ದಾರಿ, ಸಾವು ನೋವು ಹಾಗೂ ಅಪಘಾತ ಮತ್ತು ಅವಾಂತರಗಳಿಗೆ ರಹದಾರಿ ಎನ್ನುವುದು ಅಂಕೋಲಾದಲ್ಲಿ ಸಾಮಾನ್ಯ ಎನಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣಿದ್ದೂ ಕುರುಡುತನ ಮುಂದುವರಿಸಿದoತಿದ್ದು ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಹೆದ್ದಾರಿ ಸಂಚಾರ ಮಾಡುವಾಗ ಹೆದರಿ ಹೆದರಿ ಸವಾರಿ ಮಾಡ ಬೇಕಾದ ದುಸ್ಥಿತಿ ತರದೋರಿದೆ.
ಅದಕ್ಕೆ ಉದಾಹರಣೆ ಎಂಬoತೆ ತಾಲೂಕಿನ ಬಾಳೆಗುಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ನಿರ್ಮಾಣವಾಗಿರುವ ಬೃಹತ್ ಹೊಂಡದಲ್ಲಿ ಸರಕು ತುಂಬಿದ ಲಾರಿಯೊಂದರ ಟಯರ್ ಸಿಲುಕಿದ ಪರಿಣಾಮ ಲಾರಿ ಮುಂದೆ ಚಲಿಸಲಾಗದೇ ಬಿಡಿ ಭಾಗಗಳಿಗೆ ಹಾನಿ ಸಂಭವಿಸಿ ಲಾರಿ ಅಪಾಯಕಾರಿ ರೀತಿಯಲ್ಲಿ ಕೆಟ್ಟು ನಿಂತ ಘಟನೆ ಸಂಭವಿಸಿದೆ.
ಹೆದ್ದಾರಿ ಹೊಂಡಗಳಿಂದ ಪ್ರತಿದಿನ ವಾಹನ ಹಾನಿ, ಅಪಘಾತ ಭೀತಿ
ತಾಲೂಕಿನ ಬಾಳೆಗುಳಿ ಕ್ರಾಸ್ ನಿಂದ ಯಲ್ಲಾಪುರ ಕಡೆ ಸಾಗುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೊಂಡಮಯವಾಗಿ ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದ್ದು ರಸ್ತೆ ಹೊಂಡಗಳಿoದಾಗಿ ಪ್ರತಿದಿನ , ಹಲವಾರು ವಾಹನಗಳು ಕೆಟ್ಟು ನಿಲ್ಲುತ್ತಿವೆಯಲ್ಲದೇ, ಸುಮಾರು ಒಂದುವರೆ ತಾಸು ಪ್ರಯಾಣದ ಅವಧಿ ಈಗ ಎರಡೂವರೆ ತಾಸು ತೆಗೆದುಕೊಳ್ಳುತ್ತಿದೆ.
ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಬಾಳೆಗುಳಿ ಕ್ರಾಸ್ ಬಳಿ ಬೃಹತ್ ರಸ್ತೆ ಹೊಂಡಕ್ಕೆ ಬಿದ್ದು ಲಾರಿಯ ಹಿಂಬದಿ ಟಯರ್ ಎಕ್ಸಲ್ ತುಂಡಾಗಿ ಲಾರಿ ರಸ್ತೆಗೆ ಉರುಳಿ ಬೀಳುವ ರೀತಿಯಲ್ಲಿ ಒರಗಿ ನಿಂತಿದ್ದು, ರಸ್ತೆಯಲ್ಲಿ ಸಂಚರಿಸುವ ಕಾರು ಮತ್ತಿತರ ವಾಹನಗಳ ಚಾಲಕರು ಲಾರಿ ತಮ್ಮ ವಾಹನಗಳ ಮೇಲೆ ಉರುಳಿ ಬೀಳುವುದೋ ಎನ್ನುವ ಭಯದಿಂದ ಸಂಚರಿಸುವoತಾಯ್ತು.
ಹೆದ್ದಾರಿ ಹೊಂಡಗಳಿಂದ ವಾಹನ ಹಾನಿ, ಅಪಘಾತ ಭೀತಿ
ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಂಡಗಳು ಇದೀಗ ವಾಹನಗಳ ಚಾಲಕರಿಗೆ ಭಯ ಹುಟ್ಟಿಸಿದರೆ ವಾಹನಗಳ ಬಿಡಿ ಭಾಗ ಕೆಟ್ಟು ಮಾಲಕರು ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದಾಗ ಹೊಂಡ ಸರಿ ಪಡಿಸುವ ಕೆಲ ತೇಪೆ ಕಾರ್ಯ ನಡೆಸುವುದನ್ನು ಕಾಣಬಹುದಾಗಿದೆ.
ಅಂಕೋಲಾ ಹೆದ್ದಾರಿ ಅವ್ಯವಸ್ಥೆ: ಈ ಸುದ್ದಿಯನ್ನೂ ಓದಿ: ಹೊಂಡದಲ್ಲಿ ಗಿಡನೆಟ್ಟು ಸಾರ್ವಜನಿಕರ ಆಕ್ರೋಶ
ಬಹಳಷ್ಟು ಜನ ವಾಹನಗಳ ಮಾಲಿಕರು ಇಲ್ಲಿನ ರಸ್ತೆ ಮೂಲಕ ತಮ್ಮ ವಾಹನಗಳನ್ನು ಓಡಿಸಲು ಬಾಡಿಗೆ ಪಡೆಯಲು ನಿರಾಕರಿಸುತ್ತಿದ್ದಾರೆ ಎನ್ನುವ ಮಾತುಗಳು ಸಾರಿಗೆ ಉದ್ಯಮಿ ಗಣಪತಿ ನಾಯಕ ಮೂಲೆಮನೆ ಮತ್ತಿತರರಿಂದ ಕೇಳಿ ಬಂದಿದ್ದು, ಹೆದ್ದಾರಿ ಸಂಚಾರ ನರಕ ಯಾತನೆಗೆ ಕೊನೆ ಇಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ