- ಅಂಬುಲೆನ್ಸ್ ಸಂಚಾರಕ್ಕೂ ತೊಡಕು ತಂದ ರಸ್ತೆ
- ‘ಕಣ್ಣಿದ್ದೂ ಕುರುಡಾದ ಇಲಾಖೆ’ ವಿರುದ್ಧ ಸಾರ್ವಜನಿಕರ ಅಸಮಾಧಾನ
ಅಂಕೋಲಾ: ಪ್ರಮುಖ ರಾಜ್ಯ ಹೆದ್ದಾರಿಯೊಂದರಲ್ಲಿ ಹೊಂಡ ಗುಂಡಿಗಳಾಗಿ ರಸ್ತೆ ಹದಗೆಟ್ಟು, ಸಂಚಾರ ವ್ಯವಸ್ಥೆಗೆ ತೀವೃ ತೊಂದರೆಯಾಗುತ್ತಿದೆ. ಇಲ್ಲಿನ ದುರವಸ್ಥೆ ಮತ್ತು ಆಡಳಿತ ವರ್ಗದ ಬೇಜವಾಬ್ದಾರಿಗೆ ಜನಾಕ್ರೋಶ ವ್ಯಕ್ತವಾದಂತಿದ್ದು, ಚೌತಿ ಸಂದರ್ಭದಲ್ಲಿ ಆದಾರೋ ಗಿಡಗಳನ್ನು ನೆಟ್ಟು, ಕಲ್ಲುಗಳನ್ನಿಟ್ಟು ತಮ್ಮ ಅಸಮಾಧಾನ ತೋರ್ಪಡಿಸಿದಂತಿದೆ ರಾಜ್ಯ ಹೆದ್ದಾರಿಯಾಗಿರುವ ಅಂಕೋಲಾ ತಾಲೂಕಿನ ಮುಖ್ಯ ರಸ್ತೆ, ಪೂಜಗೇರಿ ಕಿರು ಸೇತುವೆ ಬಳಿ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವುದರ ಕುರಿತಂತೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಜನಾಕ್ರೋಶ ವ್ಯಕ್ತವಾಗಿದ್ದು ಗೌರಿ ಹಬ್ಬದ ದಿನ ರಾತ್ರಿ ರಸ್ತೆ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಅದಾರೋ ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದಂತಿದೆ.
ಹೊಂಡ ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆಯ ಸಂದೇಶ
ಬೆಲೆಕೇರಿಯಿಂದ ಮಂಜಗುಣಿ ಗಂಗಾವಳಿ ಸೇತುವೆ ಮೂಲಕ ಗೋಕರ್ಣ ಕಡೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ಅಪಾಯಕಾರಿ ಸ್ಥಿತಿಗೆ ತಲುಪಿದರೂ ಸಂಬಂಧಿಸಿದ ಇಲಾಖೆ ಮಾತ್ರ , ಕಳೆದ 2-3 ವರ್ಷಗಳಿಂದ ಆಗಾಗ ತೇಪೆ ಕಾರ್ಯ ನಡೆಸುವುದು, ಹೊಂಡಕ್ಕೆ ತಾತ್ಕಾಲಿಕವಾಗಿ ಕಲ್ಲು ಮಣ್ಣು , ಜಲ್ಲಿ ಕಲ್ಲು ತುಂಬಿ ರಿಪೇರಿ ಕಾರ್ಯ ನಡೆಸುತ್ತಾ ಬಂದಿದೆಯಾದರೂ, ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಿದೇ,ರಸ್ತೆ ಟೆಂಡರ್ ಆಗಿದೆ, ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭ ಎನ್ನುತ್ತಲೇ ದಿನ ದೂಡುತ್ತ ಹೆದ್ದಾರಿ ಸಂಚಾರಿಗಳ ಜೀವ ಹಾಗೂ ಜೀವನದ ಜೊತೆ ಚೆಲ್ಲಾಟವಾಡುತ್ತಾ ಬಂದಿದೆ ಎಂಬ ಆರೋಪ ಹಲವು ಬಾರಿ ಕೇಳಿ ಬಂದಿದೆ.
ಉತ್ತರ ಕನ್ನಡದಲ್ಲಿ ಭಾರೀ ಮಳೆ : ಮೂರು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ
ಈ ನಡುವೆ ಕೆಲ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲಿನ ಹೊಂಡ ಗುಂಡಿಗಳ ರಸ್ತೆ ಚಿತ್ರ ಮತ್ತು ವಿಡಿಯೋ ಸಕತ್ ವೈರಲ್ ಆಗಿ ಆಡಳಿತ ವ್ಯವಸೆಯನ್ನು ಎಚ್ಚರಿಸಿದ ಇಲ್ಲವೇ ಅಣಕಿಸಿದ ಹಲವು ನಿದರ್ಶನಗಳಿವೆ. ಆದರೆ ಕಳೆದ 2- 3 ವರ್ಷಗಳಲ್ಲಿ ಇದೇ ಅವ್ಯವಸ್ಥೆ ಮುಂದುವರೆದಂತಿದ್ದು, ಈ ಮೊದಲಿನ ಗುತ್ತಿಗೆದಾರನ ವಿಳಂಬ ನೀತಿ, ಈಗ ಹೊಸ ಟೆಂಡರ್ ಕರೆಯಲಾಗಿದೆ ಎಂಬತ್ಯಾದಿ ಸಮಜಾಯಿಷಿ ಕೊಡುವುದರಲ್ಲೇ ಕಾಲ ಕಳೆದ ಲೋಕೋಪಯೋಗಿ ಇಲಾಖೆ, ಹೀಗಿರುವಾಗ ಮಳೆಗಾಲದ ಪೂರ್ವದಲ್ಲಿ ಕಾಮಗಾರಿಗೆ ಸಾಕಷ್ಟು ಸಮಯಾವಕಾಶ ಇದ್ದರೂ, ಹೊಂಡ ಗುಂಡಿಗಳನ್ನು ಸರಿಯಾಗಿ ತುಂಬದೇ ಬೇಜವಾಬ್ದಾರಿ ತೋರಿರುವುದು ಯಾಕೆ ಎಂಬ ಆಕ್ರೋಶದ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಲೇ ಇದ್ದು ಈ ಕುರಿತು ಕೆಲವರು ನೇರವಾಗಿ ಧ್ವನಿ ಎತ್ತಿದ್ದರು.
ಅಂಕೋಲಾ ರಸ್ತೆಯ ಅವ್ಯವಸ್ಥೆ ವಿರುದ್ಧ ಜನರ ಕೂಗು
ಗಣೇಶನ ಹಬ್ಬಕ್ಕೆ ವಾಹನಗಳಲ್ಲಿ ಗಣೇಶ ಮೂರ್ತಿ ಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಚಕ್ರ ರಸ್ತೆ ಹೊಂಡಗಳಲ್ಲಿ ಬಿದ್ದು ಮಣ್ಣಿನ ಮೂರ್ತಿಗಳಿಗೆ ಏನಾದರೂ ಹಾನಿ ಸಂಭವಿಸಿದರೆ ಭಕ್ತರ ಭಾವನೆಗಳಿಗೆ ನೋವುಂಟಾಗುವ ಸಾಧ್ಯತೆ ಇರುವ ಕಾರಣ ಬೃಹತ್ ಹೊಂಡಗಳಲ್ಲಿ ಕಲ್ಲುಗಳನ್ನು ಹಾಕಿ ಗಿಡ ನೆಟ್ಟು ವಾಹನ ಚಾಲಕರ ಗಮನ ರಸ್ತೆ ಹೊಂಡಗಳತ್ತ ಬೀಳಲಿ ಎಂಬ ಸದುದ್ದೇಶದಿಂದ ರಸ್ತೆ ಹೊಂಡಗಳಲ್ಲಿ ಗಿಡಗಳನ್ನು ನೆಡಲಾಗಿದೆ ಎಂದು ಕೆಲವರು ಹೇಳಿಕೊಳ್ಳುವಂತಾಗಿದ್ದು, ಸಮೀಪದಲ್ಲಿ ಹರಿಯುವ ಪೂಜಗೇರಿ ಹಳ್ಳದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬೇರೆ ಬೇರೆ ದಿನಗಳಂದು ನೂರಾರು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವುದರಿಂದ ಮಹಿಳೆಯರು,ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳ ಬೇಕಿರುವುದರಿಂದ, ಈ ಹೊಂಡ ಗುಂಡಿಗಳ ರಸ್ತೆಯಲ್ಲೇ ಸಾಗಬೇಕಿದ್ದು ಅವರೆಲ್ಲ ರಸ್ತೆ ಹೊಂಡಗಳ ಕುರಿತು ಜಾಗ್ರತೆ ವಹಿಸದಿದ್ದರೆ ಎಡವಿ ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದಲೂ ಗಿಡಗಳನ್ನು ನೆಟ್ಟು ಹೊಂಡ ಇರುವುದನ್ನು ಗಮನ ಸೆಳೆಯುವಂತೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುವಂತಾಗಿದೆ.

ರಸ್ತೆ ಹೊಂಡಗಳಲ್ಲಿ ನೆಟ್ಟ ಗಿಡಗಳು ಈ ರಸ್ತೆ ಮೂಲಕ ಗೋಕರ್ಣ ಕಡೆ ಸಂಚರಿಸುವ ಭಕ್ತರು ಮತ್ತು ಪ್ರವಾಸಿಗರ ಗಮನ ಸೆಳೆದಿದ್ದು ಬಹಳಷ್ಟು ಜನ ತಮ್ಮ ವಾಹನಗಳಿಂದ ಕೆಳಗಿಳಿದು ಪೋಟೋ, ವಿಡಿಯೋ ಚಿತ್ರೀಕರಣ ಮಾಡಿ ತೆರಳಿದ್ದಾರೆ. ಹಬ್ಬದ ಮೊದಲು ತಾತ್ಕಾಲಿಕವಾಗಿಯಾದರೂ ಮತ್ತೊಮ್ಮೆ ಹೊಂಡ ಮುಚ್ಚುವ ಕೆಲಸ ಮಾಡಬೇಕಿದ್ದ ಇಲಾಖೆ ಮಾತ್ರ ಕಣ್ಣಿದ್ದೂ ಕುರುಡಾದಂತಿದೆ ಈ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದರಿಂದ , ಹೆದ್ದಾರಿಯಲ್ಲಿ ಇಂಗು ಗುಂಡಿ ನಿರ್ಮಿಸಿ, ಸಿಹಿ ನೀರಿನ ಅಂತರ್ಜಲ ಮಟ್ಟ ಏರಿಕೆಗೆ ಲೋಕೋಪಯೋಗಿ ಕಾರ್ಯವನ್ನು ಇಲಾಖೆ ಮಾಡಿದೆ ಎಂದು ಅಣಕಿಸುವವರೂ ಇದ್ದಾರೆ.
ಪೂಜಗೇರಿ ಸೇತುವೆ ಬಳಿ ರಸ್ತೆ ಹದಗೆಟ್ಟು ಸಂಚಾರಕ್ಕೆ ತೀವ್ರ ತೊಂದರೆ
ಪ್ರತಿಷ್ಠಿತ ಶಾಲಾ ಕಾಲೇಜುಗಳು, ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಹೋಗಿ ಬರಲು ಸಂಪರ್ಕ ಕೊಂಡಿ ಆಗಿರುವ ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳ ಓಡಾಟ ಸಾಮಾನ್ಯವಾಗಿದ್ದು, ಪೂಜಗೇರಿ ಬಳಿ ಹೆದ್ದಾರಿ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು ಸಂಚಾರ ವ್ಯವಸ್ಥೆಗೆ ತೀವೃ ತೊಡಕಾಗಿರುವುದು ಬೇಸರದ ಸಂಗತಿಯಾಗಿದ್ದು, ರಸ್ತೆ ಹೊಂಡಗಳಲ್ಲಿ ಆದಾರೋ ಗಿಡಗಳನ್ನು ನೆಟ್ಟು ಜನಾಕ್ರೋಶ ಹೊರಹಾಕಿದಂತಿದೆ.
ಗೋಕರ್ಣಕ್ಕೂ ಹೋಗಿ ಬರುವ ದೇಶ ವಿದೇಶದ ಪ್ರವಾಸಿಗರೂ ರಸ್ತೆ ಅವ್ಯವಸ್ಥೆಗೆ ಹಿಡಿಶಾಪ ಹ ಹಾಕುವಂತಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ವಾಹನವೂ ಸುಗಮವಾಗಿ ಸಂಚರಿಸಲಾಗದಷ್ಟು ಹದಗೆಟ್ಟಿರುವ ಈ ರಸ್ತೆಯಲ್ಲಿ ಹೊಂಡಗಳಿಂದಾಗಿ ಮತ್ತಷ್ಟು ಅನಾಹುತ, ಅಪಾಯ ಸಂಭವಿಸುವ ಮೊದಲು ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಹಾಗೂ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ಸಂಬಂಧಿತ ಇಲಾಖೆಗೆ ಸಮಸ್ಯೆ ನಿವಾರಣೆಗೆ ಕಟ್ಟು ನಿಟ್ಟಿನ ಸೂಚನೆ ನೀಡುವಂತಾಗಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಗೌಡ ಬೆಳಂಬಾರ ವಿನಂತಿಸಿದ್ದಾರೆ.
ಸೆಪ್ಟೆಂಬರ್ 10 ರ ಒಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಜನಪ್ರತಿನಿದಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸುತ್ತಮುತ್ತಲ ಹಳ್ಳಿಗಳ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾವಿರಾರು ಜನ ಬೀದಿಗಿಳಿದು ರಸ್ತೆ ತಡೆ, ಇಲಾಖೆ ಮುತ್ತಿಗೆಯಂತ ಪ್ರತಿಭಟನೆಗಿಳಿಯ ಬೇಕಾದ ಅನಿವಾರ್ಯತೆ ಬರಬಹುದು ಎಂದು ಪೂಜಗೇರಿ, ಮತ್ತಿತರ ಗ್ರಾಮದ ಪ್ರಮುಖರು ಎಚ್ಚರಿಸಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ