ಶಿವಮೊಗ್ಗ/ಹೊನ್ನಾವರ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯ ತುಂಬಿಕೊಂಡಿದೆ. ಜಲಾಶಯದ 11 ಗೇಟ್‌ಗಳನ್ನು ತೆರೆಯಲಾಗಿದ್ದು, 36 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಇದರ ಜೊತೆಗೆ, ಗೇರುಸೊಪ್ಪ ಜಲಾಶಯದಿಂದ 52,706 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಶರಾವತಿ ನದಿಗೆ ಹೆಚ್ಚುವರಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಉತ್ತರ ಕನ್ನಡದಲ್ಲಿ ಭಾರೀ ಮಳೆ : ಮೂರು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ
ನೀರಿನ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗದ ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಸೂಚನೆ ಹೊರಡಿಸಿದೆ.
ಇತ್ತೀಚಿನ ಮಳೆ ಪರಿಣಾಮವಾಗಿ ಹೊನ್ನಾವರದಲ್ಲಿ ಮಾತ್ರ ಸರಾಸರಿ 140 ರಿಂದ 150 ಮಿ.ಮೀ ಮಳೆಯಾಗಿದೆ. ಬಿಡುಗಡೆಯಾದ ನೀರನ್ನು ಮೊದಲು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದ್ದು, ಬಳಿಕ ಅದು ಅರಬ್ಬಿ ಸಮುದ್ರ ಸೇರುತ್ತದೆ.
ಶರಾವತಿ ಕಣಿವೆಯಲ್ಲಿ ಭಾರೀ ಮಳೆ, ಪ್ರವಾಹದ ಅಪಾಯ ಹೆಚ್ಚಳ
ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಶರಾವತಿ ಕಣಿವೆಯ ಜಲಾಶಯಗಳು ವೇಗವಾಗಿ ತುಂಬುತ್ತಿವೆ. ಲಿಂಗನಮಕ್ಕಿ ಅಣೆಕಟ್ಟಿಗೆ ಕೇವಲ ಒಂದು ಅಡಿ ನೀರು ಬಾಕಿ ಉಳಿದಿದ್ದು, ಟೇಲರೀಸ್ ಜಲಾಶಯಕ್ಕೆ ಇನ್ನೂ 5 ಮೀಟರ್ ನೀರು ತುಂಬಬೇಕಾಗಿದೆ.
ಶರಾವತಿ ನದಿ ಕೊಳ್ಳದುದ್ದಕ್ಕೂ, ಲಿಂಗನಮಕ್ಕಿಯಿಂದ ಹೊನ್ನಾವರವರೆಗೂ ಭಾರೀ ಮಳೆಯಾಗುತ್ತಿದೆ. ಸಹ್ಯಾದ್ರಿ ಪರ್ವತದಿಂದ ಹರಿದುಬರುವ ಹತ್ತಾರು ಹಳ್ಳಗಳು ನೇರವಾಗಿ ಶರಾವತಿಗೆ ಸೇರುತ್ತಿದ್ದು, ಆಣೆಕಟ್ಟಿನಿಂದ ಬರುವ ನೀರಿನ ಜೊತೆಗೆ ನದಿಯ ಸ್ವಾಭಾವಿಕ ಹರಿವೂ ಹೆಚ್ಚಳಗೊಂಡಿದೆ.
ಅಂದಾಜು ತಪ್ಪುವಷ್ಟು ನೀರಿನ ಪ್ರಮಾಣ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ವಿದ್ಯುತ್ ಉತ್ಪಾದನಾ ನಿಗಮ (KPC) ಗರಿಷ್ಠ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಆದರೂ ಅಪಾಯದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ