ಇಲ್ಲಿನ ಸಮುದ್ರ ತೀರದಲ್ಲಿ ಬಲೆ ಬೀಸಬೇಕೆಂದಿಲ್ಲ, ಆದರೂ ನೀವು ರಾಶಿ ರಾಶಿ ಜೀವಂತ ಮೀನುಗಳನ್ನು ಬಾಚಿ ತರಬಹುದು,ಇಂತಹದೊoದು ಪ್ರಕೃತಿ ವಿಸ್ಮಯ ನಡೆದದ್ದು ದೂರದಲ್ಲೆಲ್ಲೋ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದಲ್ಲಿ,ಅದನ್ನು ನೀವೇ ನೋಡಿ.
ಅಂಕೋಲಾ : ತಾಲೂಕಿನ ಹಾರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಬಿತವಾಡ ಕಡಲ ಕಿನಾರೆಯಲ್ಲಿ ಮೀನುಗಾರರು ಬಲೆ ಬೀಸದಿದ್ದರೂ, ಜೀವಂತ ಮೀನುಗಳು ತಾವೇ ತಾವಾಗಿ ಬಂದು ಕಡಲಂಚಿನಲ್ಲಿ ಬೀಳುವ ಮೂಲಕ ಮೀನಿನ ಸುಗ್ಗಿ ಕಂಡು ಬಂದು ,ಪ್ರಕೃತಿ ವಿಸ್ಮಯಕ್ಕೆ ಎಂಥವರು ಬೆರಗಾಗುವಂತೆ ಮಾಡಿದೆ.
ತರ್ಲೆ ಮೀನು , ತೋರಿ ಮೀನು, ಎಂಬಿತ್ಯಾದಿ ಹೆಸರುಗಳಿಂದ ಗುರುತಿಸಿಕೊಂಡ ಗಾಬಿತವಾಡ ವ್ಯಾಪ್ತಿಯಲ್ಲಿ,ಸಮುದ್ರದ ಅಲೆಗಳೊಂದಿಗೆ ಬಂದು ಕಡಲ ತಡಿಯಲ್ಲಿ ಚಡಪಡಿಸುವುದನ್ನು ಕಂಡ ಮೀನುಗಾರ ಮಹಿಳೆಯರು, ಮಕ್ಕಳು ಸೇರಿದಂತೆ ಸ್ಥಳೀಯರು ಮೀನಿಗಾಗಿ ಮುಗಿಬಿದ್ದು ಕೈಗೆ ಸಿಕ್ಕಷ್ಟು ಬಾಚಿಕೊಂಡು,ಸಖತ್ ಖುಷಿಗೊಂಡಿದ್ದಾರೆ.
ದಡದಲ್ಲಿ ರಾಶಿ ರಾಶಿ ಮೀನುಗಳು ಬಂದು ಬೀಳುತ್ತಿರುವ ಸುದ್ದಿ ಗ್ರಾಮದಲ್ಲಿ ಸಖತ್ ವೈರಲ್ ಆಗಿದೆ. ಹಲವರು ಮೀನುಗಳನ್ನು ಹಿಡಿದು, ಚೀಲ ಬುಟ್ಟಿಗೆ ತುಂಬಿಸಿಕೊಳ್ಳಲು ಮುಂದಾದರೆ,ಇನ್ನು ಕೆಲವರು ಈ ಪ್ರಕೃತಿ ವಿಸ್ಮಯವನ್ನು ತಮ್ಮ ಮೊಬೈಲ್ ಕ್ಯಾಮೆರಾ ಗಳಲ್ಲಿ ಸೆರೆಹಿಡಿದು ಸಂತಸ ಹಂಚಿಕೊoಡಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ್ ಠಾಕೇಕರ್ ಮತ್ತಿತರ ಪ್ರಮುಖರು ಈ ಕುರಿತು ವಿಸ್ಮಯ ವಾಹಿನಿ ಯೊಂದಿಗೆ ಮಾತನಾಡಿ, ಕಡಲ ಮಕ್ಕಳಾದ ನಾವು ಸಮುದ್ರ ದೇವತೆಯನ್ನು ಈ ಮೊದಲಿನಿಂದಲೂ ಪೂಜಿಸಿಕೊಂಡು ಬರುತ್ತಿದ್ದು,ಅದನ್ನೇ ನಂಬಿ ನಮ್ಮ ಜೀವನ ನಡೆಸುತ್ತಿದ್ದೇವೆ.ನವರಾತ್ರಿಯ ಶುಭ ಸಂದರ್ಭದಲ್ಲಿ ದುರ್ಗಾದೇವಿ ಕೃಪೆ ಎನ್ನುವಂತೆ ಈ ದಿನ ಭೂತಾಯಿ ಎನ್ನುವ ಮೀನು ತಾನೇ ತಾನಾಗಿ ಕಡಲ ತಡಿಯಲ್ಲಿ ಬಂದು ನಮ್ಮವರಿಗೆ ಸಿಕ್ಕಿದ್ದು,ಒಂದರ್ಥದಲ್ಲಿ ವರದಾನ ಎಂದೇ ನಂಬುತ್ತೇವೆ ಎಂದಿದ್ದಾರೆ.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ