ಅಂಕೋಲಾ : ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಮುಂತಾದ ಕೆಲಸಗಳಲ್ಲಿ ಅನಗತ್ಯ ವಿಳಂಬ ಮತ್ತು ಏಜೆಂಟರ ಹಾವಳಿ ಹೆಚ್ಚಾಗಿರುವ ಕುರಿತು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಸರ್ಚ ವಾರೆಂಟ್ ಸಹಿತ ಅಂಕೋಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ದಿಢೀರ್ ದಾಳಿ ಮಾಡಿದ್ದರಿಂದ,ಮಳೆಯ ವಾತಾವರಣದ ನಡುವೆಯೂ ಒಳಗಿದ್ದ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗಳು ಕುಳಿತಲ್ಲೇ ಬೆವರುವಂತಾಯಿತು.

ಲೋಕಾಯುಕ್ತ ಅಧಿಕಾರಿ ವಿನಾಯಕ ಬಿಲ್ಲವ ಹಾಗೂ ವಿಜಯ ನೇತೃತ್ವದಲ್ಲಿ 7 ಜನರ ತಂಡ ದಿಡೀರ್ ದಾಳಿ ಮಾಡಿ ನಾಲ್ಕೈದು ತಾಸುಗಳ ಕಾಲ ಕಡತಗಳು ಮತ್ತಿತರ ಕಾಗದ ಪತ್ರಗಳನ್ನು ಪರಿಶೀಲನೆ ನಡೆಸಿ, ಇನ್ನೂ ಹೆಚ್ಚಿನ ಪರಿಶೀಲನೆಗಾಗಿ ಕೆಲವು ಕಡತಗಳ ಪ್ರತಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು,ಇದು ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾದಂತಿದೆ.
ಲೋಕಾಯುಕ್ತರ ದಿಡೀರ್ ಭೇಟಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ರಾತ್ರಿ 10 ಗಂಟೆ ನಂತರ ಅಧಿಕೃತ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಜಿಲ್ಲೆಯ ಮುಂಡಗೋಡ ಮತ್ತಿತರಡೆ ಕೆಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಲಂಚ ಇಲ್ಲವೇ ಮತ್ತಿತರ ಕಾರಣದಿಂದ ಬೇಕಾಯ್ದೆ ಶೀರ ನೋಂದಣಿ ಮಾಡಿಕೊಡಲಾಗುತ್ತದೆ ಎಂಬ ಆರೋಪ ಕೇಳಿಬರುವಂತಾಗಿದೆ.
ಈ ಹಿನ್ನೆಲೆಯಲ್ಲಿಯೂ ಉಪನೊಂದಣಾಧಿಕಾರಿಗಳ ಕಚೇರಿಗೆ ಲೋಕಾಯುಕ್ತರು ದಾಳಿ, ಮಹತ್ವ ಪಡೆದಿದ್ದು, ಆನ್ ಲೈನ್ ನೊಂದಣಿ ಪ್ರಕ್ರಿಯೆ ಹೊರತಾಗಿಯೂ ನಗದು ಮತ್ತಿತರ ರೀತಿಯ ಒಳ ವ್ಯವಹಾರ ನಡೆದಿದ್ದರೆ ಪರಿಶೀಲನೆ ವೇಳೆ ಅವು ಗೊತ್ತಾಗಲಿವೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ