ಹೊನ್ನಾವರ: ಪಟ್ಟಣದ ನಾಮಧಾರಿ ಸಭಾಭವನದ ಆವಾರದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಭಕ್ತಾಭಿಮಾನಿ ವೇದಿಕೆ ಹೊನ್ನಾವರ ವತಿಯಿಂದ ಜನಾಗ್ರಹ-ಧರ್ಮಸಭೆ ನಡೆಯಿತು. ದೀಪ ಬೆಳಗುವ ಮೂಲಕ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾಗೇಶ ಕಾಮತ್ ಮಾತನಾಡಿ, ಅನಾಮಿಕ ವ್ಯಕ್ತಿಯ ಹೇಳಿಕೆಯಿಂದ ಧರ್ಮಸ್ಥಳದ ಮೇಲೆ ಆಘಾತ ಆಗಿದೆ. ಶ್ರೀಕ್ಷೇತ್ರದ ಮೇಲೆ ಕಪ್ಪುಚುಕ್ಕೆ ಇರಿಸಲು ಇನ್ನೆಷ್ಟು ಮುಸುಕುದಾರಿಗಳು ಬರಬಹುದು. ಇದೆಲ್ಲವನ್ನೂ ನಾವು ಒಕ್ಕೊರಲಿನಿಂದ ವಿರೋಧಿಸಬೇಕು ಎಂದರು.
ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸೀಮೋಲ್ಲಂಘನ : ಗಮನಸೆಳೆದ ಬೃಹತ್ ಮೆರವಣಿಗೆ
ಯುವಾಬ್ರಿಗೇಡ್ ಸಂಸ್ಥಾಪಕರು,ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಮುಖ್ಯ ವಕ್ತಾರರಾಗಿ ಮಾತನಾಡಿ, ಹಿಂದೂಗಳು ಎಚ್ಚರವಾಗಬೇಕಿದೆ. ಶ್ರೀ ಧರ್ಮಸ್ಥಳ ಕ್ಷೇತ್ರ ವಿರುದ್ದ ಅಪಪ್ರಚಾರ ಮಾಡುವವರ ವಿರುದ್ದ ಸಿಡಿದೇಳಬೇಕಿದೆ. ಯಾವಾಗ ಹಿಂದೂಗಳಲ್ಲಿ ಒಗ್ಗಟ್ಟು ಮೂಡುತ್ತದೆಯೋ ಆವಾಗ ಇಂತಹ ಅಪಪ್ರಚಾರ, ಒಗ್ಗಟ್ಟು, ಬಿರುಕು ಮೂಡಿಸುವ ಕೃತ್ಯ ಮಾಡುತ್ತಾರೆ ಎಂದರು.
ನಂತರ ಗೇರುಸೊಪ್ಪಾ ವೃತ್ತದ ಮೂಲಕ ಮೆರವಣಿಗೆ ಸಾಗಿ ಬಜಾರ್ ರಸ್ತೆಯ ಮೂಲಕ ಸಾಗಿ ಶನಿದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ತಹಶೀಲ್ದಾರ್ ಪ್ರವೀಣ ಕರಾಂಡೆ ಮನವಿ ಸ್ವೀಕರಿಸಿದರು. ಇತ್ತೀಚಿನ ಕೆಲವು ದಿನಗಳಿಂದ “ದಕ್ಷಿಣದ ಕಾಶಿ” ಎಂದೇ ಹೆಸರುವಾಸಿಯಾದ ಸಮಸ್ತ ಹಿಂದುಧರ್ಮದ ಶೃದ್ದಾ ಕೇಂದ್ರವಾದ ಸತ್ಯ ಹಾಗೂ ಧರ್ಮಕ್ಷೇತ್ರವೆಂದೇ ಪ್ರಸಿದ್ಧವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಕುಟುಂಬದ ತೇಜೋವಧೆ ಮಾಡುತ್ತ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದು.ಇವೆಲ್ಲವೂ ನಿಗೂಢ ಪಿತೂರಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಗಂಭೀರ ಆರೋಪ ಮಾಡುತ್ತ ಕ್ಷೇತ್ರದ ಹೆಸರಿಗೆ ಕಳಂಕ ತರುತ್ತಿರುವುದರ ವಿರುದ್ಧ ಕ್ರಮ ಆಗಬೇಕು.ಈ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಇದರಲ್ಲಿ ಕಾಣದ ಕೈಗಳ ಕೈವಾಡ ಇರುವುದು ಸ್ಪಷ್ಟವಾಗುತ್ತದೆ. ಪ್ರಾರಂಭದಲ್ಲಿ ಕೆಲವು ವ್ಯಕ್ತಿಗಳು ಕಪೋಲಕಲ್ಪಿತ ಕತೆಗಳನ್ನು ಕಟ್ಟಿಕೊಂಡು ಧರ್ಮಾಧಿಕಾರಿಗಳ ತೇಜೋವಧೆ ಮಾಡಲು ಪ್ರಾರಂಭಿಸಿದ್ದು ಅವ್ಯಾಹತವಾಗಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರಲು ಇನ್ನಿಲ್ಲದ ಕಾಟ ಕೊಡುತ್ತಿದ್ದು, ಇದರಲ್ಲಿ ಯಾವದೇ ಹುರುಳಿಲ್ಲ ಎಂಬುದು ಸಾಬೀತಾಗಿದೆ.
ಇವರು ಸಿದ್ಧಪಡಿಸಿದ ಸುಳ್ಳು ಸಾಕ್ಷಿಗಳು ಕೂಡ ಒಬ್ಬೊಬ್ಬರಾಗಿ ಹಿಂದೆ ಸರಿಯುತ್ತಿರುವುದು ನೋಡಿದಾಗ ಇದೊಂದು ವ್ಯವಸ್ಥಿತ ಪಿತೂರಿ ಎಂದು ಸ್ಪಷ್ಟವಾಗುತ್ತಿದೆ. ಯಾವನೋ ಒಬ್ಬ ಅನಾಮಿಕ ವ್ಯಕ್ತಿಯ ಕೈಗೆ ಬುರುಡೆ ನೀಡಿ ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿ ಸಂಪೂರ್ಣ ವ್ಯವಸ್ಥೆಯ ದುರುಪಯೋಗಪಡಿಸುತ್ತಿದ್ದಾರೆ. ಅನಾಮಿಕ ವ್ಯಕ್ತಿಯ ಸೂಚನೆಯಂತೆ ಹಲವು ಸ್ಥಳಗಳನ್ನು ಅಗೆದರೂ ಒಂದೇ ಒಂದು ಸತ್ಯ ಸಾಕ್ಷಿ ಕೂಡ ದೊರೆತಿಲ್ಲ.ಇದೆಲ್ಲವನ್ನು ಗಮನಿಸಿದಾಗ ಈ ಕೃತ್ಯ ಕೇವಲ ಕೆಲವೇ ವ್ಯಕ್ತಿಗಳಿದ್ದಲ್ಲ ಇದರ ಹಿಂದೆ ಬಹುದೊಡ್ಡ ತಂಡವೇ ಕೆಲಸ ಮಾಡುತ್ತಿದ್ದು ಇವರ ಉದ್ದೇಶ ನಿಗೂಢವಾಗಿದೆ.
ಒಟ್ಟಾರೆ ಈ ಎಲ್ಲ ಬೆಳವಣಿಗೆಯಿಂದ ಸಮಸ್ತ ಹಿಂದು ಸಮಾಜ ಆಘಾತಗೊಂಡಿದ್ದು ಶತಶತಮಾನಗಳಿಂದ ಶ್ರೀ ಕ್ಷೇತ್ರದ ಮೇಲೆ ಇಟ್ಟಂತಹ ಅಚಲ ಶೃದ್ಧಾ ಭಕ್ತಿಗೆ ಧಕ್ಕೆಯಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಇದರಿಂದ ಹಿಂದು ಸಮಾಜ ಆಕ್ರೋಶಗೊಂಡಿದೆ.ಈ ವಿಚಾರದಲ್ಲಿ ಸರ್ಕಾರದ ಕ್ರಮ ಆಮೆಗತಿಯಲ್ಲಿ ಸಾಗುತ್ತಿದ್ದು ಶೃದ್ಧಾಳುಗಳು ಭ್ರಮನಿರಸನಗೊಳ್ಳುವಂತಾಗಿದೆ. ವಿಳಂಬ ಮಾಡದೆ ಸರ್ಕಾರ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತ ಮತ್ತು ಶ್ರೀಘ್ರ ತನಿಖೆ ನಡೆಸಿ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಒಂದು ವೇಳೆ ವಿಫಲವಾದಲ್ಲಿ ಹಿಂದು ಧರ್ಮದ ಗೌರವ ಕಾಪಾಡಲು ಸ್ವಾಭಿಮಾನಿ ಭಕ್ತಕೋಟಿ ಯಾವುದೇ ಮಟ್ಟಕ್ಕೆ ಹೊಗಲು ಹಿಂಜರಿಯಲಾರದು.ಹಿಂದು ಧರ್ಮಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡುವಿರಾಗಿ ನಂಬಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಪ್ರಮುಖರು,ಪಟ್ಟಣ ಪಂಚಾಯತ, ಗ್ರಾಮಪಂಚಾಯತ ಜನಪ್ರತಿನಿಧಿಗಳು, ಶ್ರೀ ಧರ್ಮಸ್ಥಳ ಕ್ಷೇತ್ರ ಭಕ್ತಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ