ಅಂಕೋಲಾ : ಕೋಡಗನ ಕೋಳಿ ನುಂಗಿತ್ತ ಎಂಬ ಜನಪದ ಹಾಡು ಇಂದಿಗೂ ಹಲವರ ಬಾಯಲ್ಲಿ ಜನಜನಿತವಾಗಿದೆ. ಆದರೆ ಇಲ್ಲೊಂದು ಅಪರೂಪದ ಘಟನೆ ಸಂಭವಿಸಿದ್ದು ಕಾವಿಗೆ ( ಮೊಟ್ಟೆ ಮರಿಮಾಡಲು ) ಕುಳಿತಿದ್ದ ಕೋಳಿಯನ್ನು ಸಾಯಿಸಿ, ಅದರ ಸುಮಾರು 5 ಮೊಟ್ಟೆಗಳನ್ನು ನಾಗರ ಹಾವು ನುಂಗಿತ್ತ! ಎನ್ನುವಂತಾಗಿದೆ. ತಾಲೂಕಿನ ಅವರ್ಸಾ – ಸಕಲಬೇಣ ನಿವಾಸಿ ರಾಜು ನಾಯ್ಕ ಎನ್ನುವವರ ಮನೆಯೊಳಗೆ ಕಾವಿಗೆ ಕುಳಿತಿದ್ದ ಕೋಳಿಯನ್ನು ಸಾಯಿಸಿ, ಬುಟ್ಟಿಯಲ್ಲಿದ್ದ ಮೊಟ್ಟೆಗಳನ್ನು ನುಂಗಿದ್ದ ನಾಗರ ಹಾವೊಂದು , ಅದನ್ನು ಜೀರ್ಣಿಸಿಕೊಳ್ಳಲೋ ಎಂಬಂತೆ ಕಟ್ಟಿಗೆ ರಾಶಿಯಲ್ಲಿ ಸೇರಿಕೊಂಡು ವಿರಮಿಸುತಿತ್ತು ಎನ್ನಲಾಗಿದ್ದು, ಅದನ್ನು ಕಂಡ ಮನೆಯವರು,ಮೂಡೆಕಟ್ಟಾ ನಿವಾಸಿ ಪ್ರಶಾಂತ ಕಳಸ ಎನ್ನುವವರಿಗೆ ಕರೆ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದರು.
ಸ್ಥಳಕ್ಕೆ ಬಂದ ಪ್ರಶಾಂತ ಕಳಸ, ಅವರು ಆ ಮನೆಯ ಸದಸ್ಯರ ಮತ್ತು ಸ್ಥಳೀಯರ ಸಹಕಾರದಿಂದ ಕಟ್ಟಿಗೆ ರಾಶಿಯನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ಅಲ್ಲಿಯೇ ಅವಿತು ಕೊಂಡಿದ್ದ ನಾಗರ ಹಾವನ್ನು ಹಿಡಿಯಲು ಮುಂದಾಗಿದ್ದಾರೆ. ಅಂತೂ ಇಂತು ನಿಧಾನವಾಗಿ ಹಾವಿನ ಬಾಲ ಹಿಡಿದು,ಕಟ್ಟಿಗೆ ರಾಶಿಯಿಂದ ಹೊರ ತಂದು ಚೀಲಕ್ಕೆ ತುಂಬುವ ಯತ್ನ ಮಾಡಿದ್ದಾರೆ.ತಾನು ತಿಂದ ಆಹಾರದಿಂದ ತುಸು ಜಡವಾದಂತೆ ಕಟ್ಟಿಗೆ ರಾಶಿಯಲ್ಲಿದ್ದ ನಾಗರ ಹಾವು , ತನ್ನ ಸೆರೆ ಕಾರ್ಯಚರಣೆ ನಡೆಯುತ್ತಿರುವುದನ್ನು ತಿಳಿದು, ಅದರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕೆಂಬ ಭಾವನೆಯಿಂದ ತನ್ನ ಜಡತ್ವ ದೂರ ಮಾಡಿಕೊಳ್ಳಲೋ ಎಂಬಂತೆ,ನಿಧಾನವಾಗಿ ಬಾಯಿ ತೆರೆದಿದೆ.
ಅಕ್ಕ ಪಕ್ಕದವರು ಬೆರಗುಗಣ್ಣುಗಳಿಂದ ನೋಡುತ್ತಿರುವಾಗ ಹಾವು ತಾನು ನುಂಗಿದ್ದ ಸುಮಾರು 5 ಕೋಳಿ ಮೊಟ್ಟೆಗಳನ್ನು ಹೊರಕಕ್ಕಿದೆ.ಈ ಬಲು ಅಪರೂಪದ ದೃಶ್ಯವನ್ನು ಅಲ್ಲಿ ನೆರೆದವರು ತಮ್ಮ ಮೊಬೈಲ್ ಕೆಮರಾ ಕಣ್ಣುಗಳಲ್ಲಿ ಚಿತ್ರೀಕರಿಸಿದ್ದು,ಸಖತ್ ವೈರಲ್ ಆಗುವಂತಾಗಿದೆ.ಮೊಟ್ಟೆಗಳನ್ನು ಹೊರ ಕಕ್ಕಿದ ನಾಗರಹಾವಿನ ಜಡತ್ವ ದೂರವಾದಂತಾಗಿ ಚುರುಕಿನ ಚಲನೆಗೆ ಮುಂದಾಗಿದೆ. ಈ ವೇಳೆ ತನ್ನ ಬಾಲ ಉರಗ ಸಂರಕ್ಷನ ಕೈಯಲ್ಲಿ ಇರುವುದು ತಿಳಿಯುತ್ತಿದ್ದಂತೆ ಹೆಡೆ ಎತ್ತಿ ಬುಸ್ ಗುಡುತ್ತ ತನ್ನ ನೈಜ ಗುಣ ತೋರಿಸಲಾರಂಭಿಸಿದೆ. ಅದರ ಎದೆಗುಂದದ ಪ್ರಶಾಂತ್ ಕಳಸ, ಅದೇ ಹಾವನ್ನು ಸ್ಥಳೀಯರ ಸಹಕಾರದಲ್ಲಿ ಚೀಲದೊಳಗೆ ತುಂಬಲು ಯಶಸ್ವಿಯಾಗಿದ್ದಾರೆ.
ಆ ಮೂಲಕ ಅವರು,ಅರಣ್ಯ ಇಲಾಖೆಗೆ ಅದನ್ನು ಹಸ್ತಾಂತರಿಸಿ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬರುವ ಮೂಲಕ ನಾಗರ ಹಾವಿನ ಸಂರಕ್ಷಣೆಯ ಜೊತೆ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ. ಹೆಸ್ಕಾಂ ಸಿಬ್ಬಂದಿ ಆಗಿರುವ ಪ್ರಶಾಂತ ಕಳಸ ಅವರು ಉರಗ ಸಂರಕ್ಷಣೆ ಮೂಲಕವೂ ಆಗಾಗ ಗಮನ ಸೆಳೆಯುತ್ತಿದ್ದು ,ಯಾವುದೇ ಪ್ರತಿಫಲಾಕ್ಷೆ ಬಯಸದೇ ಸಾಮಾಜಿಕ ಸೇವೆ ಸಲ್ಲಿಸುತ್ತಿರುವುದಕ್ಕೆ ,ಸ್ಥಳೀಯರಿಂದ ಮೆಚ್ಚುಗೆ ಮಾತುಗಳು ಕೇಳಿಬಂದಿವೆ.ಇತ್ತೀಚಿನ ದಿನಗಳಲ್ಲಿ ತನ್ನ ಕಾರ್ಯವೈಖರಿಯಿಂದ ಪ್ರಶಾಂತ್ ಕಳಸ ಸಹ ಸುದ್ದಿಯಾಗುವಂತಾಗಿದ್ದು, ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು, ಹಾರವಾಡ, ಗಾಬಿತವಾಡ ಮತ್ತಿತರಡೆಯ ಆಯಾ ಭಾಗದ ಸ್ಥಳೀಯರ ಸಹಕಾರದಿಂದ ಈ ವರೆಗೆ ನಾಗರ ಹಾವು , ಕೇರೆ ಹಾವು , ಹೆಬ್ಬಾವು ಸೇರಿ ಸುಮಾರು 30 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸಂರಕ್ಷಿಸಿದ್ದು, ಕಳಸ ಅವರ ಸೇವೆಗೆ ಪ್ರೋತ್ಸಾಹಿಸಲು ಸಂಬಂಧಿತ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವಂತಾಗಬೇಕಿದೆ.ನಿಮಗೂ ಈ ವಿಷಯ ಇಷ್ಟವಾದಲ್ಲಿ ಹೆಸ್ಕಾಂ ಸಿಬ್ಬಂದಿಯ ವಿಶೇಷ ಸಾಮಾಜಿಕ ಸೇವೆಗೆ ಮತ್ತು ಉರಗ ಸಂರಕ್ಷಣೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತು,ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಶೇರ್ ಮಾಡಿ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ