ಅಂಕೋಲಾ: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತಿತರ ಕಾರಣಗಳಿಂದ ಗುಡ್ಡದ ಭಾಗವೊಂದು ಕುಸಿದ ಪರಿಣಾಮ, ಭಾರೀ ಗಾತ್ರದ ಕಲ್ಲುಬಂಡೆಗಳು ರಸ್ತೆಯಲ್ಲಿ ಉರುಳಿ ಬಿದ್ದು , ರಸ್ತೆ ಸಂಚಾರಕ್ಕೆ ಕೆಲಕಾಲ ತೊಡಕಾದ ಘಟನೆ ಸಂಭವಿಸಿದೆ. ಅಂಕೋಲಾ ತಾಲೂಕಿನ ಸಗಡಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಿಗದ್ದೆ ಗ್ರಾಮಕ್ಕೆ ಸಾಗುವ ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಗುಡ್ಡ ಕುಸಿದ ಪರಿಣಾಮ ಭಾರೀ ಗಾತ್ರದ ಕಲ್ಲು ಬಂಡೆಗಳು ರಸ್ತೆಗೆ ಉರುಳಿ ಬಿದ್ದು ಕೆಲ ಕಾಲ ರಸ್ತೆ ಸಂಚಾರ ಬಂದಾಗಿತ್ತು.
ದೇವಿಗದ್ದೆ ಗ್ರಾಮ ಹಾಗೂ ಸುತ್ತಮುತ್ತಲಿನ ಕೆಲವರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಇದೇ ರಸ್ತೆ ಮೂಲಕ ಸಂಚರಿಸಬೇಕಿದ್ದು, ಅದೃಷ್ಟವಶಾತ್ ಗುಡ್ಡ ಕುಸಿತದ ಸಂದರ್ಭದಲ್ಲಿ ಜನ-ಜಾನುವಾರುಗಳು ಹತ್ತಿರದಲ್ಲಿ ಇಲ್ಲದ ಕಾರಣ ಸಂಭವನೀಯ ಅನಾಹುತ ತಪ್ಪಿದಂತಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ರಸ್ತೆಯಲ್ಲಿ ಬಿದ್ದ ಕಲ್ಲು ಬಂಡೆಗಳನ್ನು ತೆರುವುಗೊಳಿಸಲು ಕ್ರಮ ಕೈಗೊಂಡರು.
ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ