ಅಂಕೋಲಾ: ಆಟ ಪಾಠಗಳಲ್ಲಿ ಸದಾ ಮುಂದಿದ್ದ ವಿದ್ಯಾರ್ಥಿಯೊಬ್ಬ,ವಾರ್ಷಿಕ ಪರೀಕ್ಷೆ ಪಾಸಾದರು,ಮುಂದಿನ ತರಗತಿಗೆ ಬರಲಾಗಲೇ ಇಲ್ಲ. ಬೇಸಿಗೆ ರಜೆಯಲ್ಲಿ ಕಾಡತೊಡಗಿದ ಜ್ವರದಿಂದ ಆತನನ್ನು ಚಿಕಿತ್ಸೆಗಾಗಿ ನಾಲ್ಕಾರು ಆಸ್ಪತ್ರೆಗೆ ದಾಖಲಿಸಿದರೂ,ವೈದ್ಯಕೀಯ ಲೋಕಕ್ಕೂ ಸವಾಲಾದ ಆ ಖಾಯಿಲೆ ಕೊನೆಗೂ ಆ ಬಾಲಕನನ್ನೇ ಬಲಿ ತೆಗೆದುಕೊಂಡ ಧಾರುಣ ಘಟನೆ ಸಂಭವಿಸಿದೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಸಕಲ ಬೇಣ ನಿವಾಸಿಯಾಗಿದ್ದ ಸುಮಾರು 11 ವರ್ಷದ ಬಾಲಕನೇ ಮೃತ ದುರ್ದೈವಿ.
ಅರವ ಪಾಂಡುರಂಗ ನಾಯ್ಕ ಎಂಬ ಈ ಬಾಲಕ ಅವರ್ಸಾ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹುಡುಗರ ಶಾಲೆಯಲ್ಲಿ ವಿದ್ಯಾರ್ಥಿಯಾಗಿ,ಆಟ ಪಾಠಗಳಲ್ಲಿ ಸದಾ ಮುಂದಿದ್ದು, ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಇದೇ ಶಾಲೆಯಲ್ಲಿ 6ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 7ನೇ ವರ್ಗಕ್ಕೆ ದಾಖಲಾಗಬೇಕಿದ್ದ .ಈ ನಡುವೆ ಶಾಲೆಯ ಇತರೆ ಮಕ್ಕಳಂತೆ ಬೇಸಿಗೆ ರಜಾ ಅವಧಿಯನ್ನು ಕಳೆಯಬೇಕಿದ್ದ ಆ ಹುಡುಗನ ಬಾಳು ವಿಧಿಯಾಟಕ್ಕೆ ಸಿಲುಕಿ ನರಳುವಂತಾಗಿದೆ.
ಕಳೆದ ಸುಮಾರು ಮೂರು ತಿಂಗಳ ಹಿಂದೆ ಆರಂಭದಲ್ಲಿ ಸಾಮಾನ್ಯ ಜ್ವರ ಲಕ್ಷಣಗಳು ಕಾಣಿಸಿಕೊಂಡಿದ್ದು , ಅಂಕೋಲಾ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟು ಮನೆಗೆ ಮರಳಿದ್ದನ್ನಾದರೂ ಆಗಾಗ ಮತ್ತೆ ಮೂರ್ಛೆರೋಗದಂತ ಲಕ್ಷಣಗಳು ಕಾಣಿಸಿಕೊಳ್ಳುತ್ತಿತ್ತು ಎನ್ನನಲಾಗಿದೆ. ಆ ಬಳಿಕ ಮೇ ತಿಂಗಳ ಆರಂಭದಲ್ಲಿ ಕುಮಟಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಯ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿ ಮೆದುಳು ಮತ್ತು ನರಸಂಬಂಧಿ ಕಾಯಿಲೆಗೆ ಚಿಕಿತ್ಸೆ ಮುಂದುವರಿಸಲಾಗಿತ್ತು.
ನಂತರ ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ನಡುವೆ ದುರದೃಷ್ಟವೋ ಎನ್ನುವಂತೆ ಕೊನೆಗೂ ಆ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರೆಳೆದಿದ್ದಾನೆ.ಅನ್ನ ಆಹಾರ ಸೇವಿಸಲಾಗದ ಸ್ಥಿತಿಯಲ್ಲಿದ್ದ ಆತನ ಉಳಿವಿಗೆ ಹಲವರು ಮಾಡಿದ ಪ್ರಯತ್ನ ಕೊನೆಗೂ ಕೈಗೂಡದೇ ನಿರಾಶೆ ಮೂಡುವಂತಾಗಿದೆ. ಹವ್ಯಾಸಿ ರಂಗಭೂಮಿಯ ಕಲಾವಿದರಾಗಿರುವ ಆಟೋರಿಕ್ಷಾ ವೃತ್ತಿಯ ಮೂಲಕ ಸಂಸಾರ ನಿರ್ವಹಣೆ ಮಾಡುತ್ತಿದ್ದ ಪಾಂಡುರಂಗ ನಾಯ್ಕ್,ತಮ್ಮ ಮನೆಯ ಕರುಳ ಕುಡಿ ಆರವನನ್ನು ಬದುಕಿಸಿಕೊಳ್ಳಲೇ ಬೇಕೆಂದು, ತಾವು ಕೂಡಿಟ್ಟ ಬಿಡಿಗಾಸಿನ ಜೊತೆ ,ನೆಂಟರಿಷ್ಟರು ಪರಿಚಿತರು ಮತ್ತಿತರೆಡೆ ಸಾಲ ಮಾಡಿ ಚಿಕಿತ್ಸೆ ವೆಚ್ಚ ಭರಿಸಲು ಮುಂದಾಗಿದ್ದರು.
ಅದು ಸಾಲದಾದಾಗ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಮತ್ತಿತರರ ಮೂಲಕ ಬಾಲಕನ ಪ್ರಾಣ ಕಾಪಾಡಲು ನಾನಾ ರೀತಿಯ ನೆರವಿಗಾಗಿ ಕೈ ಚಾಚಿದ್ದರು. ಆರೋಗ್ಯ ಇಲಾಖೆ ವತಿಯಿಂದಲೂ ಖಾಸಗಿ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರದ ನಿಯಮಾವಳಿಯಂತೆ ಕ್ರಮ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು, ಅಂಕೋಲಾ ತಾಲೂಕಾ ಆರೋಗ್ಯ ಅಧಿಕಾರಿ ಡಾ ಜಗದೀಶ ನಾಯ್ಕ ಸಹ ತಮ್ಮ ಕೈಲಾದ ವೈಯಕ್ತಿಕ ಕಿರು ನೆರವು ನೀಡಿ ಮಾನವೀಯತೆ ಮೆರೆದಿದ್ದರು. ಒಟ್ಟಾರೆಯಾಗಿ ಆ ಬಡ ಕುಟುಂಬದ ಮುದ್ದು ಬಾಲಕನನ್ನು ಬದುಕಿಸಲು ಹತ್ತಾರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ,ಹಲವರು ಪ್ರಾರ್ಥಿಸಿದರೂ ಪ್ರಯೋಜನವಾಗದೇ ಅರವನ ಪ್ರಾಣಪಕ್ಷಿ ಹಾರಿಹೋಗಿತ್ತು.
ಅಂಕೋಲಾ, ಕಾರವಾರ, ಕುಮಟಾ, ಮಣಿಪಾಲ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನ ನಿಮಾನ್ಸ್ ಮತ್ತು ಇಂದಿರಾಗಾಂಧಿ ಆಸ್ಪತ್ರೆಗಳಲ್ಲಿ ಸೇರಿ ಹತ್ತಾರು ವೈದ್ಯರು ಪರೀಕ್ಷಿಸಿದರೂ,ವೈದ್ಯಕೀಯ ಲೋಕಕ್ಕೂ ಅಚ್ಚರಿ ಮತ್ತು ಸವಾಲು ಎಂಬಂತೆ ಬಾಲಕನಿಗೆ ಬಾಧಿಸಿದ ಜ್ವರ ಈ ರೀತಿ ಮಾರಣಾಂತಿಕವಾಗಬಹುದು ಎಂಬ ನಿರೀಕ್ಷೆ ಸ್ಥಳೀಯರು ಮತ್ತು ಕುಟುಂಬ ವರ್ಗಕ್ಕೆ ಇದ್ದಿರಲಿಕ್ಕಿಲ್ಲ.ವಿಧಿಯ ಕ್ರೂರ ಆಟದ ಮುಂದೆ ಆರವ ಎಂಬ ಬಾಲಕ ಮೃತ ಪಟ್ಟ ಸುದ್ದಿ ಕೇಳಿ,ಊರು, ಶಾಲೆ ಹಾಗೂ ಇತರೆಡೆಯ ನೂರಾರು ಜನರ ಕಣ್ಣಾಲಿಗಳು ತೇವವಾಗಿ,ಮನಸ್ಸು ಭಾರವಾದಂತಿತ್ತು. ನೊಂದ ಈ ಬಡ ಕುಟುಂಬಕ್ಕೆ ಸಂಬಂಧಿತ ಇಲಾಖೆ ಹಾಗೂ ಜನಪ್ರತಿನಿಧಿಗಳು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರದಿಂದ ಯೋಗ್ಯ ನೆರವಿನ ಪರಿಹಾರ ನೀಡಿ ಸಂತೈಸಬೇಕಿದೆ.
ಸಂಘ ಸಂಸ್ಥೆಗಳು, ದಾನಿಗಳು,ಮಾನವಿಯ ಹೃದಯವಂತರು ಮತ್ತಿತರರು ನೊಂದ ಬಡಕುಟುಂಬಕ್ಕೆ ಕೈಲಾದ ಸಹಾಯ ಮತ್ತು ನೆರವು ನೀಡಬೇಕಿದೆ. ಆರಂಭದಲ್ಲಿ ಸಾಮಾನ್ಯ ಜ್ವರದಂತೆ ಕಂಡು ಬಂದಿದ್ದ ಈ ರೋಗ ಲಕ್ಷಣಗಳು,ಮಂಗನ ಕಾಯಿಲೆ ಎನ್ನಲಾಗುವ ಕೆಎಫ್‌ಡಿಯೇ ? ಅಥವಾ ಬೇರೆ ಜ್ವರ ಇಲ್ಲವೇ ಇತರೆ ಕಾಯಿಲೆ ಲಕ್ಷಣಗಳೇ ಎನ್ನುವುದು ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯಿಂದ ತಿಳಿದು ಬರಬೇಕಿದೆ. ರೋಗಲಕ್ಷಣಗಳು ಅದೇನೇ ಇದ್ದರೂ ಬಾಳಿ ಬೆಳಗಬೇಕಿದ್ದ ಪ್ರತಿಭೆಯೊಂದು ಕಮರಿ ಹೋಗಿರುವುದು ದುರಂತವೇ ಸರಿ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ