ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕಳೆದ 24 ಗಂಟೆಗಳಿoದ ನಿರಂತರವಾಗಿ ಮಳೆಯಾಗುತ್ತಿದ್ದು, ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕುಮಟಾ ತಾಲೂಕಿನ ಕೆಲವೆಡೆ ಕೃತಕ ಪ್ರವಾಹ ಉಂಟಾಗಿದ್ದು, ಕೆಳಗಿನಕೇರಿ ಮಜರೆಯ 17 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆ. ಕುಮಟಾ ತಹಶೀಲ್ದಾರರಾದ ಕೃಷ್ಣ ಕಾಮ್ಕರ ಅವರು ಸ್ಥಳಕ್ಕೆ ತೆರಳಿ ಪರಿಶಿಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಧ್ಯ ತಾಲೂಕಿನಲ್ಲಿ ಒಂದು ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ತಹಶೀಲ್ದಾರ್ ಅವರು ಮಾಹಿತಿ ನಿಡಿದ್ದಾರೆ.
ಇದೇ ವೇಳೆ, ತಾಲೂಕಿನ ಗುಡ್ನಕಟ್ಟು ಭಾಗದಲ್ಲಿ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡು ಬಂದಿದೆ. ತಡರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಗೋಕರ್ಣ ತೊರ್ಕೆ ಗ್ರಾಮದ ಸಾವಿತ್ರಿ ರಾಮಕೃಷ್ಣ ನಾಯಕ ಅವರ ಹಳೆಯ ಮನೆಯು ಕುಸಿದು ಬಿದ್ದು ಹಾನಿಯಾಗಿದೆ. ಆ ಮನೆಯಲ್ಲಿ ಯಾರೂ ವಾಸ್ತವ್ಯ ಇಲ್ಲದ ಕಾರಣ ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಲಿoಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆಯ ಕುರಿತು ಎರಡನೇಯ ಮುನ್ನೆಚ್ಚರಿಕೆ ನೀಡಲಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ನೀರನ್ನು ಹಂತ ಹಂತವಾಗಿ ಹೊರಬಿಡುವುದಾಗಿ ತಿಳಿಸಲಾಗಿದೆ. ಹೀಗಾಗಿ ಜಲಾಶಯದ ಕೆಳಭಾಗz ಸಾರ್ವಜನಿಕರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದುಬಾರಿ ಬೆಟ್ಟದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಕುಮಟಾ ಮುಖ್ಯ ರಸ್ತೆಯ ಬೇಡ್ಕಣಿ ಸಮೀಪದ ದುಬಾರಿ ಘಟ್ಟದಲ್ಲಿ ಭೂಕುಸಿತ ಉಂಟಾಗಿದ್ದು ವಾಹನ ಸವಾರರು ಜಾಗೃತಿಯಿಂದ ಓಡಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,