ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೊಸ ಭಾಷ್ಯವನ್ನು ಬರೆಯುವ ಮೂಲಕ ಜನರ ನಡುವೆ ಬೆರೆಯುವ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡು ಸಮಾಜಘಾತುಕ ಶಕ್ತಿಗಳಿಗೆ ಕಂಟಕವಾಗಿ ಕಾಡಿದ್ದ ದಕ್ಷ ಪೊಲೀಸ್ ಅಧಿಕಾರಿ ಜಯರಾಜ್ ಅವರು ಪೊಲೀಸ್ ಉಪಾಧೀಕ್ಷಕ ಹುದ್ದೆಗೆ ಪದೋನ್ನತಿ ಹೊಂದಿ ಸಿ.ಐ.ಡಿ ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಜಯರಾಜ್ ಕರ್ತವ್ಯ ನಿರ್ವಹಿಸಿದ ಪ್ರತಿಯೊಂದು ಪ್ರದೇಶಗಳಲ್ಲಿ ಜನಸಾಮಾನ್ಯರು ಅವರನ್ನು ಸದಾ ನೆನೆದರೆ ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿದವರು ಅವರ ಹೆಸರು ಕೇಳಿದರೆ ಒಳಗಿಂದ ಒಳಗೆ ನಡುಗುವ ರೀತಿಯಲ್ಲಿ ಕರ್ತವ್ಯ ನಿರ್ವಹಣೆಯ ಮೂಲಕ ಜಯರಾಜ್ ಗುರುತಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಆಲೂರು ಹಟ್ಟಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ ಜಯರಾಜ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಸಮೀಪದ ಸರ್ಕಾರಿ ಶಾಲೆಯಲ್ಲಿ ಪೂರೈಸಿ ದಾವಣಗೆರೆಯಲ್ಲಿ ಬಿ.ಎ, ಬಿ.ಇಡಿ ಪದವಿ ಮತ್ತು ಎಂ.ಎ ಸ್ನಾತಕೋತ್ತರ ಪದವಿ ಪಡೆದರು.
ಪೊಲೀಸ್ ಅಧಿಕಾರಿಯಾಗಬೇಕು ಎಂಬ ಬಾಲ್ಯದ ಕನಸನ್ನು ಹೊತ್ತು ಸಾಗಿದ ಜಯರಾಜ್ ಅವರು ಉತ್ತಮ ಕಬಡ್ಡಿ ಆಟಗಾರನಾಗಿ ಕುವೆಂಪು ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದಲ್ಲಿ ಚಾಂಪಿಯನ್ ಆಟಗಾರ ಎನಿಸಿದ್ದು, ಎನ್.ಸಿ.ಸಿಯಲ್ಲಿ ಸಿ ಸರ್ಟಿಪಿಕೇಟ್ ಪಡೆದಿರುವುದು ಜಯರಾಜ್ ಕನಸು ನನಸು ಮಾಡುವಲ್ಲಿ ಸಹಯಾಕವಾಗಿ 2003 ರಲ್ಲಿ ಪೊಲೀಸ್ ಇಲಾಖೆ ಸೇರಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನದ ಪಯಣವನ್ನು ಆರಂಭಿಸುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ನಡುವೆ ಪೊಲೀಸ್ ಸೇವೆ ಎಂಬ ಮಹತ್ವಪೂರ್ಣ ಅಂಶಕ್ಕೆ ಹೆಚ್ಚಿನ ಮಹತ್ವ ನೀಡಿದರು.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಂದಿನ ತಹಶೀಲ್ಧಾರ ಆಗಿದ್ದ ಸಾಂಸ್ಕೃತಿಕ ಮನಸ್ಸಿನ ಗಟ್ಟಿ ನಿರ್ಧಾರದ ಉದಯಕುಮಾರ ಶೆಟ್ಟಿ ಅವರೊಂದಿಗೆ ಸೇರಿ ಹತ್ತಾರು ಜನ – ಮನ ಸೂರೆಗೊಳ್ಳುವ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದಲ್ಲದೇ , ಕರಾವಳಿಯ ಗಂಡು ಮೆಟ್ಟಿನ ಕಲೆಯಾದ ಯಕ್ಷಗಾನ ಕಲಿತು , ಅಭ್ಯಸಿಸಿ 2009ರಲ್ಲಿ ಯಕ್ಷರಂಗದಲ್ಲಿ ಕಾಲಿಗೆ ಗೆಜ್ಜೆ ಕಟ್ಟೆ , ಮನೋಜ್ಞ ಅಭಿನಯದ ಮೂಲದ ಯಕ್ಷ ಪ್ರೇಮಿಗಳ ಮನದಲ್ಲಿ ಅಚ್ಚಳಿಯದ ಪಾತ್ರಧಾರಿಯಾದವರಿವರು. ಕರ್ನಾಟಕದ ಬಾರ್ಡೋಲಿ ಎಂದೆನಿಸಿದ ಅಂಕೋಲೆಯಲ್ಲಿ ರಾಷ್ಟ್ರೀಯ ಉತ್ಸವ ಸಮಿತಿ ವತಿಯಿಂದ , ಸ್ಥಳೀಯ ಚಿನ್ನದಗರಿ ಯುವಕ ಸಂಘದ ವಿಶೇಷ ಸಹಕಾರದಿಂದ ಸ್ವಾತಂತ್ರ್ಯೋತ್ಸವ ಕಪ್ ಎನ್ನುವ ಕ್ರಿಕೆಟ್ ಪಂದ್ಯಾವಳಿ ಹುಟ್ಟು ಹಾಕಿ , ತಾಲೂಕಿನ ವಿವಿಧ ಸಂಘ ಸಂಸ್ಥೆಗಳು , ಇಲಾಖೆಗಳ ನಡುವೆ ಸೌಹಾರ್ದ ಮತ್ತು ಬಾಂಧ್ಯವ ಬೆಸೆಯುವ ಮತ್ತು ಕ್ರೀಡೆ ಮೂಲಕ ಎಲ್ಲರನ್ನೂ ಒಂದೆಡೆ ಸೇರಿಸಿ ಹಬ್ಬದ ಮೆರಗು ಹೆಚ್ಚಿಸಿದ ಇವರು , ವರ್ಗಾವಣೆ ಗೊಂಡ ನಂತರವೂ ಅಂಕೋಲಿಗರ ಪ್ರೀತಿ ನಂಟು ಉಳಿಸಿಕೊಂಡವರು.
ಹಾಗಾಗಿಯೇ ಸರ್ವರ ಸಹಕಾರದಲ್ಲಿ ಸ್ವಾತಂತ್ರ್ಯೋತ್ಸವ ಕಪ್ ದಶಮಾನೋತ್ಸವ ಕಂಡು ಅಧಿಕಾರಿಗಳ ಹೆಸರನ್ನು ಮತ್ತೆ ಮತ್ತೆ ಸ್ಮರಿಸುವಂತೆ ಮಾಡಿದೆ. ಸಿಬ್ಬಂದಿಗಳ ಮೂಲಭೂತ ಸೌಕರ್ಯಗಳ ಕುರಿತು ಸದಾ ಗಮನ ನೀಡುತ್ತಾ ಬಂದಿದ್ದ ಜಯರಾಜ್ ಅಂಕೋಲಾದಲ್ಲಿ ಪೊಲೀಸ್ ಸಿಬ್ಬಂದಿಗಳ ವಸತಿಗೃಹ ಆವರಣದಲ್ಲಿ ಇರುವ ಶ್ರೀರಾಮ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಮಹತ್ವ ನೀಡಿ, ತಮ್ಮೆಲ್ಲರ ಸೇವೆ – ಶ್ರಮದಾನದ ಜೊತೆ , ದಾನಿಗಳ , ರಾಮ ಭಕ್ತರ ಮೂಲಕ ಭವ್ಯ ಮಂದಿರ ನಿರ್ಮಿಸಿ , ಪ್ರತಿ ವರ್ಷ ಇಲ್ಲಿ ವಿಶೇಷ ಪೂಜೆ ಮತ್ತಿತರ ಕಾರ್ಯಗಳು, ಕಾರ್ಯಕ್ರಮಗಳು ನಡೆಯುತ್ತಾ ಬರಲು ಮೂಲ ಕಾರಣೀ ಕರ್ತರಾಗಿದ್ದರು.
2010 ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ಜಯರಾಜ್ ದಾವಣಗೆರೆ, ಶಿವಮೊಗ್ಗ, ಭದ್ರಾವತಿ ಗಳಲ್ಲಿ ಸೇವೆ ಸಲ್ಲಿಸಿ ರೌಡಿಗಳಿಗೆ ಸಿಂಹಸ್ವಪ್ನವಾಗಿ ಬನ್ನಂಜೆ ರಾಜಾ ಸೇರಿದಂತೆ ಹಲವಾರು ರೌಡಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳೊಂದಿಗೆ ತಾವು ಸಹ ಮಹತ್ತರ ಕರ್ತವ್ಯ ನಿರ್ವಹಿಸಿದವರು, ಇವರ ಕಾರ್ಯ ದಕ್ಷತೆಗೆ 2015 ರಲ್ಲಿ ಮುಖ್ಯಮಂತ್ರಿಗಳ ಬಂಗಾರದ ಪದಕ ಒಲಿದು ಬಂತು.
2017 ರಲ್ಲಿ ಬೆಂಗಳೂರಿಗೆ ವರ್ಗಾವಣೆಗೊಂಡು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿ ಬಾಂಗ್ಲಾ ಡಕಾಯಿತರ ಗ್ಯಾಂಗ್ ಸೇರಿದಂತೆ ಸಮಾಜ ಘಾತುಕ ಶಕ್ತಿಗಳ ನಿಗ್ರಹಕ್ಕೆ ಶೂಟೌಟ್ ನಂತಹ ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಿ ಜನ ಸಾಮಾನ್ಯರ ರಕ್ಷಣೆಗೆ ಮಹತ್ವ ನೀಡಿದರು.
ನಂತರ ಬಾಣಸವಾಡಿ, ಚಾಮರಾಜಪೇಟೆ, ಗೋವಿಂದಪುರ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಅವರು ಠಾಣಾ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳನ್ನು ಭೇದಿಸುವ ತಮ್ಮ ದಕ್ಷತೆ ಮತ್ತು ಬದ್ಧತೆಯನ್ನು ತೋರಿದರು. ಮಾರು,ವೇಷ ಧರಿಸಿ ಹೊರ ರಾಜ್ಯಗಳಿಗೆ ಹೋಗಿ ಅಪಾಯಕಾರಿ ಪರಿಸ್ಥಿತಿತಿಗಳನ್ನು ಎದುರಿಸಿ ಕುಖ್ಯಾತ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ತಂದರು.
ಜಯರಾಜ್ ಅವರ ಸೇವೆ ಗುರುತಿಸಿ ಪ್ರಸಕ್ತ ಸಾಲಿನ ರಾಷ್ಟ್ರಪತಿ ಸೇವಾ ಪದಕವನ್ನು ಅವರಿಗೆ ನೀಡಿ ಪುರಸ್ಕಾರಿಸಲಾಗಿದೆ.
ಇದೀಗ ಅವರು ಡಿ.ವೈ.ಎಸ್.ಪಿ ಯಾಗಿ ಪದೋನ್ನತಿ ಹೊಂದಿ ಸಿ.ಐ.ಡಿ ಜವಾಬ್ದಾರಿ ವಹಿಸಿಕೊಂಡಿರುವುದು ಅವರು ಕರ್ತವ್ಯ ನಿರ್ವಹಿಸಿರುವ ಎಲ್ಲಡೆ ಸಾರ್ವಜನಿಕರಿಂದ ಸಂತೋಷ ವ್ಯಕ್ತವಾಗಿದೆ. ಖ್ಯಾತ ನಟ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅವರು , ಜಯರಾಜ ಅವರ ಸಾಮಾಜಿಕ ಕಳಕಳಿಯನ್ನು ವಿಶೇಷವಾಗಿ ಪ್ರಶಂಸಿಸಿ , ಉನ್ನತ ಹುದ್ದೆ ಅಲಂಕರಿಸಿರುವ ಜಯರಾಜ ಇವರಿಗೆ ಅಭಿನಂದಿಸಿ ಶುಭ ಕೋರಿದ್ದು , ಇತರೆ ನೂರಾರು ಗಣ್ಯರು , ಆಪ್ತರು ,ಹಿತೈಷಿಗಳು , ಅಭಿಮಾನಿಗಳೂ ಸಹ ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ