ಅಂಕೋಲಾ: KEBಯ ನಿವೃತ್ತ ಎಕ್ಸಿಕ್ಕೂಟಿವ್ ಇಂಜಿನಿಯರ್ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರಾಮಚಂದ್ರ ತಿಮ್ಮಣ್ಣ ಮಿರಾಶಿ ಅವರು ತಾಲೂಕಿನ ಅಗ್ರಗೋಣ ಮೂಲದವರಾಗಿದ್ದು , ಕಳೆದ ಅನೇಕ ದಶಕಗಳಿಂದ ಪಟ್ಟಣ ವ್ಯಾಪ್ತಿಯ ಲಕ್ಷೇಶ್ವರದಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಸುಖಸಂಸಾರ ನಡೆಸುತ್ತಾ ಬಂದಿದ್ದರು. ಹೀಗಿರುತ್ತಾ 1994 ರ ಜೂನ್ 16 ರಂದು ಆ ಕುಟುಂಬದ ಪಾಲಿಗೆ ಅತೀವ ದುಃಖ ಹಾಗೂ ನೋವಿನ ದಿನವಾಗಿದ್ದು ,ಆಕಸ್ಮಿಕ ರಸ್ತೆ ಅಪಘಾತದಲ್ಲಿ ಮನೆ ಮಗ ಮಂಜುನಾಥ ಮಿರಾಶಿ ಬದುಕುಳಿಯಲಾರದೇ ದೈವ ಪಾದ ಸೇರಿದ್ದ.
ಈ ನಡುವೆ ಮಗನ ನೆನಪು ಚಿರಸ್ಥಾಯಿ ಆಗಿಸಲು ಈ ಕುಟುಂಬ, ಮೃತನ ಸ್ಮರಣಾರ್ಥ ಬೇರೆ ಬೇರೆ ಪ್ರದೇಶ ಹಾಗೂ ಸಂದರ್ಭಗಳಲ್ಲಿ ನೂರಾರು ಕಾರ್ಯಗಳಿಗೆ ತಮ್ಮ ಕೈಲಾದ ಸೇವೆ – ಸಹಕಾರ – ಪ್ರಾಯೋಜಕತ್ವ ವಹಿಸುತ್ತಾ ಬಂದಿತ್ತು. ಅದರ ಹೊರತಾಗಿ ಅಜ್ಜಿ ಕಟ್ಟಾದ ಕ್ರಿಸ್ತಮಿತ್ರ ಸೇವಾಶ್ರಮದಲ್ಲಿರುವ ವೃದ್ಧರು , ಅಸಹಾಯಕರಿಗೆ ಈ ಹಿಂದೆ ಬ್ಲ್ಯಾಂಕೆಟ್ ನೀಡಿದ್ದ ಮಿರಾಶಿ ಕುಟುಂಬ, ಮಳೆಗಾಲದ ಇಂದಿನ ದಿನಗಳಲ್ಲಿ ಅಲ್ಲಿನ ನಿವಾಸಿಗಳಿಗೆ ಅತ್ಯಗತ್ಯವಾಗಿದ್ದ ಹೊಸ ಬಟ್ಟೆಗಳನ್ನು ನೀಡಿ, ಅವರ ಸಂತಸದಲ್ಲಿ ತಮ್ಮ ಮಗನ ಅಗಲುವಿಕೆ ನೋವು ಮರೆಯಲು ಯತ್ನಿಸಿತು.
ಮಳೆಗಾಲ ಎದುರಿಸಲು ಅಗತ್ಯವಾಗಿದ್ದ ಬಟ್ಟೆ ಸಿಕ್ಕ ಸಂತಸದಲ್ಲಿ ಧನ್ಯತೆ ಸೂಚಿಸಿದ ಆಶ್ರಮ ನಿವಾಸಿಗಳು
ಬೆಳಗ್ಗೆ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆರ್ ಟಿ ಮಿರಾಶಿ ಅವರ ಹಿರಿಯ ಮಗಳು ಸಂಧ್ಯಾ ರಮೇಶ ನಾಯಕ ಮಾತನಾಡಿ, ನನ್ನ ಸಹೋದರನನ್ನು ಕಳೆದುಕೊಂಡ ದುಃಖ ಮರೆಯಲು ನಮ್ಮ ಕುಟುಂಬಕ್ಕೆ ಇದೊಂದು ಸುದೈವಾವಕಾಶವಾಗಿದೆ. ಅನಿವಾರ್ಯ ಕಾರಣಗಳಿಂದ ಕುಟುಂಬ ಬಿಟ್ಟು ಇಲ್ಲಿ ಬಂದು ಬಾಳಬೇಕಾದ ನಿಮ್ಮನ್ನೆಲ್ಲ ನೋಡಿದರೆ ಮನಸ್ಸಿಗೆ ಒಂದೆಡೆ ಬೇಸರ ಮತ್ತು ನೋವೆನಿಸುತ್ತದೆ. ಆದರೆ ನಿಮಗೆ ಇನ್ನಷ್ಟು ಸೇವೆ ನೀಡುವ ಭಾಗ್ಯ – ಶಕ್ತಿ ನಮ್ಮ ಕುಟುಂಬಕ್ಕೆ ಹೆಚ್ಚಲಿ ಎಂದರು. ಕಳೆದ ಮೂರು ದಶಕಗಳ ಹಿಂದೆ ತಮ್ಮ ಮಗನನ್ನು ಕಳೆದುಕೊಂಡ ಘಟನೆ ಕುರಿತು ಮಾತನಾಡಿದ ಆರ್ ಟಿ ಮಿರಾಶಿ, ತನ್ನ ಏಕೈಕ ಸುಪುತ್ರನ ಸಾವಿನ ನೋವು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ.
ಆದರೆ ನಾನು ಮತ್ತು ನನ್ನ ಹೆಂಡತಿ – ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡಿ ಮುಂದೆಯೂ ನಿಮ್ಮೆಲ್ಲರಿಗೂ ನಮ್ಮ ಕೈಲಾದ ಸೇವೆ ಸಹಕಾರ ನೀಡುವುದಾಗಿ ಹೇಳುತ್ತಾ ಕ್ಷಣಕಾಲ ಭಾವುಕರಾದರು. ಮಳೆಗಾಲದ ಈ ದಿನಗಳಲ್ಲಿ ತಮಗೆ ಅಗತ್ಯವಾಗಿದ್ದ ಹೊಸ ಬಟ್ಟೆ ನೀಡಿದ್ದಕ್ಕೆ ಸಂತಸಗೊoಡ ಅಶ್ರಮದ ಕೆಲ ನಿವಾಸಿಗಳು, ಮಿರಾಶಿ ಕುಟುಂಬಕ್ಕೆ ಧನ್ಯತೆ ಸಮರ್ಪಿಸಿದರೆ ಅವರ ಸಂತಸ ಕಂಡ ಮಿರಾಶಿ ಕುಟುಂಬದವರು ಮಗನ ಅಗಲುವಿಕೆ ದುಃಖ ಮರೆಯಲೆತ್ನಿಸಿ ತಮ್ಮ ಸೇವೆ ಸಾರ್ಥಕವಾಗುತ್ತಿದೆ ಎಂದು ಸಮಾಧಾನ ಪಟ್ಟರಲ್ಲದೇ ಮಗನ ಪುಣ್ಯ ಸ್ಮರಣೆ ನಿಮಿತ್ತ ಜೂನ್ 16 ರಂದು ಆಶ್ರಮವಾಸಿಗಳಿಗೆ ಭೋಜನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ