ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ದೂರು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಸಾಮಾನ್ಯ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ,ಸ್ಥಳ ಪರಿಶೀಲಿಸಿದ ವೇಳೆ ವೈದ್ಯಾಧಿಕಾರಿಗಳು ಮತ್ತು ತಂಡದವರು ಆಡಿದ ಮಾತುಗಳು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿತ್ತು. ಇಲ್ಲಿ ಹೆಗ್ಗಣಗಳ ರಾಶಿ,ಸುಟ್ಟು ಕರಕಲಾಗಿ ಜಿಡ್ಡು ಗಟ್ಟಿದ ಎಣ್ಣೆಯ ಬಗ್ಗೆ ಅವರಾಡಿದ ಮಾತುಗಳೇನು? ನೀವೇ ನೋಡಿ
ಅಂಕೋಲಾ: ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಪಟ್ಟಣ ವ್ಯಾಪ್ತಿಯ ಸಣ್ಣ ಹೊಟೇಲ್ ಒಂದಕ್ಕೆ ದಾಳಿ ಮಾಡಿದ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡ ಅಲ್ಲಿನ ಅಶುಚಿತ್ವ, ಆರೋಗ್ಯಕ್ಕೆ ಹಾನಿಕರ ಆಗಬಲ್ಲ ರೀತಿಯಲ್ಲಿ ಆಹಾರ ಪದಾರ್ಥಗಳ ತಯಾರಿಕೆ ಕಂಡು ಕ್ಷಣ ಕಾಲ ಅವರೇ ಹೌಹಾರುವಂತಾಗಿತ್ತು.

ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ನೇತೃತ್ವದ ತಂಡ ದಾಳಿ ನಡೆಸಿದ ವೇಳೆ ಜಿಡ್ಡು ಗಟ್ಟಿದಂತಿರುವ ಎಣ್ಣೆಯನ್ನು ಬಾಣಲೆಯಲ್ಲಿ ಕಂಡು, ಇಲಿ ಹೆಗ್ಗಣಗಳ ಆಶ್ರಯ ತಾಣದಂತಿರುವ ಅಡುಗೆ ಕೋಣೆ, ಸ್ವಚ್ಚಗೊಳಿಸದ ಪಾತ್ರಗಳನ್ನು ಕಣ್ಣಾರೆ ಕಂಡು ಮಾಲಿಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆರೋಗ್ಯಕ್ಕೆ ಹಾನಿಕಾರಕ ರೀತಿಯಲ್ಲಿ ತಿಂಡಿ ತಿನಿಸು ತಯಾರಿಕೆ
ಪಟ್ಟಣದ ಅಜ್ಜಿಕಟ್ಟಾ ಶಾಲೆ ಬಳಿ ಈ ಸಣ್ಣ ಹೋಟೆಲ್ ಇದ್ದು ಇಲ್ಲಿ ಆಹಾರ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡದಿರುವ ಕುರಿತು, ಒಂದೊಮ್ಮೆ ಇಲ್ಲಿನ ಆಹಾರ ಸೇವಿಸಿದರೆ ಸಣ್ಣ ಮಕ್ಕಳು ಹಾಗೂ ಇತರರ ಆರೋಗ್ಯದ ಮೇಲೆ ಕ್ರಮೇಣ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು ಹೋಟೆಲಿನಲ್ಲಿ ಸ್ವಚ್ಛತೆ ಇಲ್ಲದಿರುವುದು, ಕಲಬೆರೆಕೆ ಎಣ್ಣೆ ಬಳಕೆ, ಹೃದಯ ಸಂಬಂಧಿ ಹಾಗೂ ಸಾಂಕ್ರಾಮಿಕ ರೋಗ ಹರಡುವ ರೀತಿಯಲ್ಲಿ ತಿಂಡಿ ತಿನಿಸುಗಳ ತಯಾರಿಕೆ ಕಂಡು ಬoದಿದೆ.
ಮಾಲಿಕರಿಗೆ ನೋಟಿಸ್ ಮತ್ತು ಎಚ್ಚರಿಕೆ
ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡದಂತೆ ಖಡಕ್ ಆಗಿ ಎಚ್ಚರಿಸಿದ ಅಧಿಕಾರಿಗಳು, ಇದೇ ರೀತಿ ತಾಲೂಕಿನ ಬೇರೆಡೆಯೂ ಅಶುಚಿತ್ವ, ಬಳಸಿದ ಎಣ್ಣೆಯಲ್ಲೇ ಪದೇ ಪದೇ ಆಹಾರ ಪದಾರ್ಥಗಳನ್ನು ಕರಿಯುವುದು ಮತ್ತಿತರ ರೀತಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಅಂಶ ಪತ್ತೆಯಾದಲ್ಲಿ ಅಂತಹ ಸ್ಥಳಗಳ ಮೇಲೂ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸುವುದಾಗಿ ತಾಲೂಕು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.
ಎಚ್ಚರ ಗ್ರಾಹಕ ಎಚ್ಚರ
ಆರೋಗ್ಯ ಶಿಕ್ಷಣಾಧಿಕಾರಿ ಶೈಲಜಾ ಭಂಡಾರಿ,ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ ನಾಯ್ಕ, ಅಕ್ಷಯಕುಮಾರ್ ಮೊದಲಾದವರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಹಾದಿ ಬೀದಿಗಳೇ ಇರಲಿ,ಹೋಟೆಲ್ ಮತ್ತಿತರ ಸ್ಥಳಗಳೇ ಇರಲಿ, ಆಹಾರ ತಯಾರಿಸುವವರು , ಮಾರುವವರ ಜವಾಬ್ದಾರಿಯಂತೆ,ಅರೋತ್ಪನ್ನಗಳನ್ನು ಕೊಂಡುಕೊಳ್ಳುವ ಗ್ರಾಹಕರು ಸಹ ಜಾಗರೂಕರಾಗಿದ್ದರೆ ಮಾತ್ರ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಯಾರದು ಲಾಭದಾಸೆಗೆ ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಆರೋಗ್ಯ ಕೆಡುವುದರಲ್ಲಿ ಎರಡು ಮಾತಿಲ್ಲ. ಎಚ್ಚರ ಗ್ರಾಹಕ ಎಚ್ಚರ’ ! ?
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ