ಅಂಕೋಲಾ: ಭೂಮ್ತಾಯಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲೂಕಿನ ಹಾಗೂ ಇತರಡೆಯ ಅಸಂಖ್ಯ ಭಕ್ತರ ಪಾಲಿನ ಶಕ್ತಿ ದೇವತೆ, ಶ್ರೀಶಾಂತಾದುರ್ಗಾ ದೇವಿಯ ಹೊಸ್ತಿನ (ಹೊಸತು) ಹಬ್ಬ ಸಕಲ ಧಾರ್ಮಿಕ ಮತ್ತು ಸಾಂಪ್ರದಾಯಿಕವಾಗಿ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಕೃಷಿ ಮತ್ತು ಶ್ರಮ ಪ್ರಧಾನ ಸಂಸ್ಕೃತಿಯ ಪ್ರತೀಕ
ಕೃಷಿ ಮತ್ತು ಶ್ರಮ ಪ್ರಧಾನ ಸಂಸ್ಕೃತಿಯ ಈ ತಾಲೂಕಿನಲ್ಲಿ ಶ್ರೀ ಶಾಂತಾದುರ್ಗಾ ದೇವಿಯನ್ನು ಭೂಮಿ ದೇವತೆ, ಭೂಮ್ತಾಯಿ ಎಂದೇ ಭಕ್ತರು ಪೂಜಿಸಿ ಆರಾಧಿಸಿಕೊಂಡು, ತಾಯಿಯನ್ನೇ ನಂಬಿ ಬಾಳಿ ಬದುಕುತ್ತಿದ್ದಾರೆ. ಕರಾವಳಿಯ ಇತರ ಅನೇಕ ಕಡೆಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಹೊಸ್ತಿನ ಹಬ್ಬದ ಹಬ್ಬ ಆಚರಿಸಲಾಗುತ್ತದೆಯಾದರೂ ಶ್ರೀಶಾಂತಾದುರ್ಗಾ ದೇವಿಯ ಹೊಸ್ತಿನ ಹಬ್ಬ ಪೂರ್ವಾ ಮಳೆ ನಕ್ಷತ್ರದಲ್ಲಿ ಆಚರಿಸುತ್ತ ಬರಲಾಗುತ್ತಿದೆ.
ಶ್ರೀದೇವಿಯ ಕಳಸದ ಮೆರವಣಿಗೆ
ಹೊಸ್ತಿನ ಹಬ್ಬದ ಪ್ರಯುಕ್ತ ಶ್ರೀದೇವಿಯ ಕಳಸದ ಮೆರವಣಿಗೆ ಕುಂಬಾರಕೇರಿಯ ಕಳಸ ದೇವಾಲಯದಿಂದ ಪಂಚವಾದ್ಯ ,ಜಾಗಟೆ ಮೇಳದೊಂದಿಗೆ, ದಾರಿ ಮಧ್ಯೆ ಅಲ್ಲಲ್ಲಿ ಭಕ್ತರ ಆರತಿ, ಪೂಜೆ ಸ್ವೀಕರಿಸುತ್ತ ಶ್ರೀಶಾಂತಾದುರ್ಗಾ ದೇವಾಲಯಕ್ಕೆ ಆಗಮಿಸಿತು.
ನಂತರ ದೇವಸ್ಥಾನಕ್ಕೆ ಸಂಬಧಿಸಿದ ಭತ್ತದ ಗದ್ದೆಗೆ ತೆರಳಿ ಅಲ್ಲಿ ಭತ್ತದ ಪೈರಿಗೆ ಪೂಜೆ ಸಲ್ಲಿಸಿ, ತೆನೆಗಳನ್ನು ಕೊಯ್ದು ತಂದು ದೇವಾಲಯದಲ್ಲಿ ಕದಿರು ಹಬ್ಬ ಆಚರಿಸಲಾಯಿತು.
ಪ್ರಸಾದ ರೂಪದಲ್ಲಿ ಭತ್ತದ ಪೈರು ವಿತರಣೆ
ದೇಗುಲದಲ್ಲಿ ಪೂಜಿಸಿದ ಭತ್ತದ ಪೈರುಗಳನ್ನು ಪ್ರಸಾದ ರೂಪದಲ್ಲಿ ಪಡೆದುಕೊಂಡ ನೂರಾರು ಭಕ್ತರು,ತಮ್ಮ ತಮ್ಮ ಮನೆಯ ಪ್ರಧಾನ ಬಾಗಿಲು,ದೇವರ ಕೋಣೆ,ಕೃಷಿ ಯಂತ್ರಗಳು,ವಾಹನ ಮತ್ತಿತರಡೆ ಕಟ್ಟುವ ಮೂಲಕ ಧನ್ಯತೆ ಮೆರೆದರಲ್ಲದೇ,ಭವಿಷ್ಯದ ಒಳಿತಿಗೆ ಪ್ರಾರ್ಥಿಸಿದರು.
ಶ್ರೀದೇವಿಯ ದೇವಸ್ಥಾನಕ್ಕೆ ಸಂಬಂಧಿಸಿದ ಗುನಗರು, ಬಿಡ ಗುನಗರು, ಕಟಗಿದಾರರು, ಮೊಕ್ತೆಸರರು, ಅರ್ಚಕರು,ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು, ಸ್ವಯಂ ಸೇವಕರು,ಹಬ್ಬದ ಆಚರಣೆಗೆ ಸಂಬಂಧಿಸಿದ ಇತರೆ ಪ್ರಮುಖರು ಹಾಗೂ ಭಕ್ತ ಜನರು ಪಾಲ್ಗೊಂಡಿದ್ದರು. ಹೊಸ್ತು ಹಬ್ಬದಂದು ಹೊಸ ಬೆಳೆ ಪೂಜೆ ಮತ್ತು ಅದರ ಪ್ರಸಾದವೂ ಹೊಸತನಕ್ಕೆ ಪೂರಕ ಸಂಪ್ರದಾಯದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ