ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಪದೇ ಪದೇ ಸದ್ದು ಮಾಡುತ್ತಿದ್ದು, ಬೆಳಗಿನ ಜಾವ ಗ್ರಾಮೀಣ ಠಾಣಾ ಪೋಲಿಸರು ಅಕ್ರಮ ಗೋಸಾಗಾಟದ ವಾಹನದ ಮೇಲೆ ದಾಳಿ ನಡೆಸಿ ಬಾರಿ ಮೌಲ್ಯದ ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದಿಂದ ಭಟ್ಕಳ ಹನೀಫಾಬಾದ್ ಕಡೆಗೆ ಸಾಗಿಸುತ್ತಿದ್ದ ಅಶೋಕ್ ಲೈಲೆಂಡ್ ಕಂಟೇನರ್‌ನ್ನು ಪೊಲೀಸರು ಹನೀಫಾಬಾದ್ ಪೆಟ್ರೋಲ್ ಬಂಕ್ ಹತ್ತಿರ ವಾಹನವನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ ಆಹಾರವನ್ನು ಒದಗಿಸದೆ ಹಿಂಸಾತ್ಮಕವಾಗಿ ಕಟ್ಟಿಹಾಕಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ಅಬುಬಕ್ಕರ್ ಗಂಗಾವಳಿ , ಹಮೀದ್ , ಆಸೀಫ್, ಶಾಹುಲ್ ಹಮೀದ ಕೆ, ಬಂಧಿತ ಆರೋಪಿಗಳಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಮಹತ್ವದ ಕಾರ್ಯಾಚರಣೆಯಲ್ಲಿ 10 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದ್ದು, ಇವುಗಳ ಮೌಲ್ಯ ಸುಮಾರು 7 ಲಕ್ಷ ಎಂದು ಅಂದಾಜಿಸಲಾಗಿದೆ.
ಗೋವುಗಳಿಗೆ ಮೇವು, ನೀರು ಒದಗಿಸಲು ಸಂಘಟನೆಗಳ ಒತ್ತಾಯ
ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಶನಿವಾರ ಬೆಳಿಗ್ಗೆ ಗ್ರಾಮೀಣ ಠಾಣೆಗೆ ಭೇಟಿ ನೀಡಿ ಗೋವುಗಳಿಗೆ ಮೇವು, ನೀರನ್ನು ನೀಡಿ ಗೋಶಾಲೆಗೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ