ಅಂಕೋಲಾ : ಶಿಕ್ಷಕರು ವೃತ್ತಿಯಿಂದ ನಿವೃತ್ತರಾದರೂ ಜನಮಾನಸದಿಂದ ಎಂದಿಗೂ ನಿವೃತ್ತರಾಗುವುದಿಲ್ಲ. ಗುರು ಶಿಷ್ಯರ ಸಂಬಂಧ ಎಂದಿಗೂ ಚಿರಸ್ಥಾಯಿಯಾಗಿರುತ್ತದೆ ಎಂದು ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ ಹೇಳಿದರು. ಅವರು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಸೆ 5 ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ನಿವೃತ್ತ ಮತ್ತು ಉತ್ತಮ ಶಿಕ್ಷಕರಿಗೆ ಗೌರವ
ಜಿಲ್ಲಾ ಪಂ . ಉ.ಕ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿಕ್ಷಕರ ದಿನಾಚರಣೆ ಸಮಿತಿ ಅಂಕೋಲಾ ಹಾಗೂ ದಿ ಅಂಕೋಲಾ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಅಂಕೋಲಾದಲ್ಲಿ ಅರ್ಥಪೂರ್ಣವಾಗಿ ಆಚರಣೆಗೊಂಡಿತು.
ತಹಶೀಲ್ದಾರ ಡಾ ಚಿಕ್ಕಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಕರ ಕಾರ್ಯ ತುಂಬಾ ಮಹತ್ವಪೂರ್ಣವಾದದ್ದು, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಏಳಿಗೆಯನ್ನು ಸಂಭ್ರಮಿಸುತ್ತಾರೆ. ನಾನೊಬ್ಬ ಅನರಕ್ಷಸ್ಥ ಕುಟುಂಬದಲ್ಲಿ ಹುಟ್ಟಿದ್ದು ಇಂದು ಎಂ ಬಿ ಬಿ ಎಸ್ ಹಾಗೂ ಕೆ ಎ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಸೀಲ್ದಾರ್ ಆಗಿ ನಿಂತಿದ್ದೇನೆ ಅಂದರೆ ನನ್ನ ತಂದೆ ತಾಯಿಯರ ಪರಿಶ್ರಮದಂತೆ ನನ್ನನ್ನು ತಿದ್ದಿ ತೀಡಿದ ಗುರುಗಳು ಮುಖ್ಯ ಕಾರಣ ಎಂದರು.
ಸಮಾಜದಲ್ಲಿ ಶಿಕ್ಷಕರ ಮಹತ್ವದ ಕುರಿತು ಉಪನ್ಯಾಸ
ಗ್ಯಾರಂಟಿ ಪ್ರಾಧಿಕಾರದ ತಾಲೂಕ ಅಧ್ಯಕ್ಷ ಪಾಂಡುರಂಗ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಉಲ್ಲಾಸ ಹುದ್ದಾರ ಸಮಾಜದಲ್ಲಿ ಶಿಕ್ಷಕರ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕ ನ್ಯಾಯವಾದಿ ನಾಗಾನಂದಬಂಟ ಮಾತನಾಡಿ ಶಿಕ್ಷಕರಿಗೆ ಶುಭಾಶಯ ಕೋರಿದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ರಾಯ್ಕರ ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ. ಹೆಚ್ಚುವರಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ರಾಮು ಗುನಗಿ ಸ್ವಾಗತಿಸಿದರು. ಬಿ ಆರ್ ಸಿ ಮಂಜುನಾಥ ನಾಯ್ಕ ವಂದಿಸಿದರು.
ವೇದಿಕೆಯಲ್ಲಿ ಡಿ ವಾಯ್ ಪಿ ಸಿ ಭಾಸ್ಕರ ಗಾಂವಕರ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ದೇವರಾಯ ನಾಯಕ, ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ಎಂ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ, ಮಾದ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ ನಾಯಕ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ನಾಯಕ, ಮಂಜುನಾಥ ನಾಯಕ, ರಾಜೇಶ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ನಿವೃತ್ತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಕ, ಶಿಕ್ಷಕಿಯರನ್ನು, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಗಲಿದ ಶಿಕ್ಷಕರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ ನಾಯಕ ಹೊಸ್ಕೇರಿ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಶಿಸ್ತಿನ ಸಂಘಟನೆಗೆ ಸಾಕ್ಷಿಯಾಯಿತು.
ಅಗ್ರಗೋಣ ಸ.ಹಿ ಪ್ರಾ ಶಾಲೆಯ ಶಿಕ್ಷಕ ರಾಜೇಶ ನಾಯಕ ಸೂರ್ವೆ ಹಾಗೂ ಕೇಣಿ ಸ.ಮಾ.ಹಿ. ಪ್ರಾ. ಶಾಲೆಯ ಶಿಕ್ಷಕಿ ರಶೀದಾ ಎಸ್. ಶೇಖ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಮೇಘನಾ ಗೋವಿಂದ ಗೌಡ ಯಕ್ಷನೃತ್ಯವನ್ನು ಮತ್ತು ಶ್ರುತಿ ಮಡಿವಾಳ ಭರತ ನಾಟ್ಯವನ್ನು ಪ್ರದರ್ಶಿಸಿದರು. ಶಿಕ್ಷಕ ರಾಮನಾಥ ಸಂಗಡಿಗರು ಪ್ರಾರ್ಥಿಸಿ ನಾಡಗೀತೆಯನ್ನು ಪ್ರಸ್ತುತಪಡಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ