ಅಂಕೋಲಾ, ಆಗಸ್ಟ್ 26 : ಸರ್ಕಾರಿ ಇಲಾಖೆ ಒಂದರ ಕಟ್ಟಡದ ಗೋಡೆಗಳ ನಡುವಿನ ಇಕ್ಕಟ್ಟಾದ ಸ್ಥಳದಲ್ಲಿ ಯಾರೋ ತಂದಿಟ್ಟು ಹೋಗಿದ್ದರೆನ್ನಲಾದ ಸೂಟ್ ಕೇಸ್ ಒಂದು ಪಟ್ಟಣ ವ್ಯಾಪ್ತಿಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದಲ್ಲದೇ,ಸೂಟ್ಕೇಸ್ ನಲ್ಲಿ ಏನಿರಬಹುದೆಂಬ ಕುತೂಹಲವು ಹಲವರಲ್ಲಿ ಮೂಡುವಂತಾಗಿತ್ತು.
ಅಂಕೋಲಾ ಪಟ್ಟಣ ವ್ಯಾಪ್ತಿಯ ಬಸ್ ನಿಲ್ದಾಣದ ಅತಿ ಹತ್ತಿರದಲ್ಲಿರುವ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ ವಿಭಾಗಕ್ಕೆ ಸಂಬಂಧಿಸಿದ ಕಛೇರಿಯ ಗೋಡೆ ಮತ್ತು ಪಕ್ಕದ ಇನ್ನೊಂದು ಕಟ್ಟಡದ ಗೋಡೆಗಳ ಮಧ್ಯೆ ಇಕ್ಕಟ್ಟಾದ ಸ್ಥಳದಲ್ಲಿ ಅದ್ಯಾರೋ ಎಂದೋ ಇಟ್ಟು ಹೋಗಿದ್ದ ಸೂಟ್ ಕೇಸ್ ನ್ನು ಆಗಸ್ಟ್ 26 ರ ಮಂಗಳವಾರ ಬೆಳಿಗ್ಗೆ ಗಮನಿಸಿದ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಹಾಗಾದರೆ ಈ ಸೂಟ್ ಕೇಸಿನಲ್ಲಿ ಹಣದ ಕಂತೆ ಕಂತೆಗಳಿರಬಹುದೇ? ಬಾಂಬ್ ಮತ್ತಿತರ ಸ್ಪೋಟಕಗಳಿರಬಹುದೇ ? ಅಥವಾ ಇನ್ನೇನಿರಬಹುದು ? ತಂದಿಟ್ಟವರಾರು ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುವಂತಾಗಿ, ಸೂಟಕೇಸ್ ಸುತ್ತ ಅನುಮಾನದ ಹುತ್ತ ಬೆಳೆವಂತಾಗಿ ,ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾ, ಪಟ್ಟಣದಲ್ಲಿ ಕೆಲ ಕಾಲ ಕೆಲವರಲ್ಲಿ ಆತಂಕ ಮೂಡುವಂತಾದರೆ, ಇನ್ನು ಕೆಲವರು ಮುಂದೇನಾಗಬಹುದು ಎಂದು ಕುತೂಹಲದಿಂದ ಕಾದು ಕುಳಿತಂತಿತ್ತು.
ಇದನ್ನೂ ಓದಿ: ಭಟ್ಕಳದಲ್ಲಿ ಬೆಂಕಿ ಅನಾಹುತ
ಕೂಡಲೇ ಸ್ಥಳಕ್ಕೆ ಬಂದ ಅಂಕೋಲಾ ಪೊಲೀಸರು , ಸೂಟ್ ಕೇಸ್ ಇರುವ ಸ್ಥಳ ಪರಿಶೀಲಿಸಿ, ಕಾರವಾರದ ಎ ಎಸ್ ಸಿ ಟೀಮ್ ಗೆ ಕರೆ ಮಾಡಿದ್ದಲ್ಲದೇ , ತನಿಖೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸೂಟಕೇಸ್ ಪತ್ತೆಯಾದ ಸ್ಥಳದ ಸುತ್ತ ಸಾರ್ವಜನಿಕ ಪ್ರವೇಶ ನಿರ್ಭಂಧಿಸಿದ್ದರು. ಕೆಲ ಹೊತ್ತಿನಲ್ಲೇ ಕಾರವಾರದಿಂದ ಅಂಕೋಲಾಕ್ಕೆ ಬಂದಿಳಿದ ವಿಧ್ವಂಸಕ ಕೃತ್ಯ ತಪಾಸಣಾ ತಂಡದವರು, ಶ್ವಾನ ದಳ ಸಮೇತ ತಪಾಸಣಾ ಕಾರ್ಯ ಶುರು ಹಚ್ಚಿಕೊಂಡಿದ್ದಾರೆ. ಸೂಟ್ ಕೇಸ್ ಇದ್ದ ಸ್ಥಳಗಳನ್ನು ಡಿಟೆಕ್ಟರ್ ಬಳಸಿ, ಶ್ವಾನ ದಳದೊಂದಿಗೆ ತೀವೃ ತಪಾಸಣೆಗೊಳಪಡಿಸಿ, ಬಳಿಕ ಇಕ್ಕಟ್ಟಾದ ಜಾಗದಿಂದ ಹಗ್ಗ ಬಳಿಸಿ ನಿಧಾನವಾಗಿ ಹೊರಗಡೆ ಎಳೆದು ತಂದಿದ್ದಾರೆ.
ಈ ವೇಳೆ ಅಲ್ಲಿ ನೆರೆದ ಕೆಲವರಲ್ಲಿ ಸೂಟ್ ಕೇಸಿನಲ್ಲಿ ಏನಿರಬಹುದು ಎಂಬ ಆತಂಕ ಒಂದೆಡೆಯಾದರೆ,ಇನ್ನೊಂದೆಡೆ ಕುತೂಹಲವು ಮೂಡಿದಂತಿತ್ತು. ಅಂತೂ ಇಂತೂ ನಿಧಾನವಾಗಿ ಸೂಟಕೇಸ್ ತೆರೆದು ನೋಡಿದರೆ ಅದರ ಒಳಗಡೆ ಬಟ್ಟೆ ಬರೆಗಳು, ಔಷಧಿ – ಮಾತ್ರೆ ಪೊಟ್ಟಣ, ಮತ್ತಿತರ ವಸ್ತುಗಳು ಕಂಡುಬಂದಿದ್ದಲ್ಲದೇ ಭಾವಚಿತ್ರ ಸಹಿತ ಬ್ಯಾಂಕ್ ಪಾಸ್ ಬುಕ್ , ಚೆಕ್ ಬುಕ್ ಮತ್ತಿತರ ದಾಖಲೆ ಪತ್ರಗಳು ಸಿಗುವ ಮೂಲಕ ಸ್ಥಳೀಯರಲ್ಲಿ ಕೆಲ ಕಾಲ ಮೂಡಿದ್ದ ಆತಂಕ ಮರೆಯಾದಂತಾಗಿದೆ.
ದಾಖಲಾತಿಗಳಲ್ಲಿ ಯಲ್ಲಾಪುರ ಮೂಲದ ಒರ್ವ ರ ವಿಳಾಸ ಪತ್ತೆಯಾಗಿದ್ದು , ಪೊಲೀಸರು ಅಲ್ಲಿರುವ ಫೋನ್ ನಂಬರಿಗೆ ಸಂಪರ್ಕಿಸಿದರೆ ದೂರದ ದಾವಣಗೆರೆ ಅಥವಾ ಇನ್ನೆಲ್ಲಿಯವರೋ ಕರೆ ಸ್ವೀಕರಿಸಿದರು ಎನ್ನಲಾಗಿದ್ದು,ವಿಳಾಸ ಖಚಿತಪಡಿಸಿಕೊಳ್ಳಲು ಮತ್ತು ಸೂಟ್ ಕೇಸ್ ಬಿಟ್ಟವರಾರು,ಮತ್ತು ಯಾಕೆ ಇಟ್ಟು ಹೋಗಿದ್ದರು ಎನ್ನುವ ಕುರಿತು ಪೊಲೀಸ್ ತನಿಕೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ಸರಕಾರಿ ಇಲಾಖೆ ಬಳಿ ಪತ್ತೆಯಾದ ಸೂಟ್ಕೇಸಿನಲ್ಲಿ ಕಂತೆ ಕಂತೆ ನೋಟುಗಳಿರಬಹುದೇ,ಬಾ ಮತ್ತಿತರ ಸ್ಪೋಟಕ ವಸ್ತುಗಳಿರಬಹುದೇ ಎಂಬ ಪ್ರಶ್ನೆಗಳಿಗೆ ಸಿಪಿಐ ಚಂದ್ರಶೇಖರ್ ಮಠಪತಿ ನೇತೃತ್ವದಲ್ಲಿ ವಿದ್ವಂಸಕ ಕೃತ್ಯ ತಪಾಸಣ ತಂಡ ಮತ್ತು ಪೊಲೀಸ್ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಉತ್ತರ ದೊರೆಯುವ ಮೂಲಕ ಸ್ಥಳೀಯರ ಆತಂಕವೂ ದೂರವಾದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ