ಭಟ್ಕಳ, ಆಗಸ್ಟ್ 22: ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ತೀವ್ರವಾಗಿ ಖಂಡಿಸಿ, ಅದರ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಭಟ್ಕಳ ತಾಲೂಕಿನ ದೈವಪಾತ್ರಿಗಳು, ದಾಸರು ಹಾಗೂ ಭಕ್ತವೃಂದವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ: ಬೃಹತ್ ಜನಾಗ್ರಹ-ಧರ್ಮಸಭೆ
ಅನಾದಿ ಕಾಲದಿಂದಲೂ ಹಿಂದೂಗಳ ಶೃದ್ಧಾಕೇಂದ್ರವಾದ ಶ್ರೀ ಮಂಜುನಾಥ ಸ್ವಾಮಿಯ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮತ್ತು ಅಲ್ಲಿನ ಧರ್ಮಾಧಿಕಾರಿಗಳ ಕುಟುಂಬದ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಚು ಮಾಡಿಕೊಂಡು ಕ್ಷೇತ್ರದ ಹೆಸರನ್ನು ಹಾಳು ಮಾಡುವತ್ತ ನಿರತರಾಗಿದ್ದಾರೆ.
ಧರ್ಮಸ್ಥಳ ವತಿಯಿಂದ ಅನೇಕ ಅಭಿವೃದ್ಧಿ ಕೆಲಸ
ನಾವು ಅನೇಕ ತಲೆಮಾರುಗಳ ಹಿಂದಿನಿoದ ಕ್ಷೇತ್ರದ ಭಕ್ತರಾಗಿ ನಡೆದುಕೊಂಡು ಬರುತ್ತಿದ್ದು, ಧರ್ಮಸ್ಥಳ ಕ್ಷೇತ್ರದಿಂದ ಕಳೆದ ಕೆಲವು ದಶಕಗಳಿಂದ ಅನೇಕ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದು ಒಂದು ಸರ್ಕಾರದ ರೀತಿಯಲ್ಲಿ ಕ್ಷೇತ್ರವು ಜನಸಾಮಾನ್ಯರಿಗೆ ನೆರವು ನೀಡುವಂಥ ಕೆಲಸವನ್ನು ಮಾಡುತ್ತಿದೆ. ಅದೇ ರೀತಿ ಕರ್ನಾಟಕದ ತುಂಬೆಲ್ಲಾ ಅನೇಕ ದೇವಸ್ಥಾನಗಳು, ಬಸದಿಗಳು, ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಶ್ರೀ ಕ್ಷೇತ್ರವು ಮಾಡಿಕೊಂಡು ಬಂದಿದೆ.
ಈ ಕ್ಷೇತ್ರವು ನಮ್ಮ ಆರಾಧ್ಯ ಕ್ಷೇತ್ರವಾಗಿದ್ದು ನಾವು ಕ್ಷೇತ್ರದ ಬಗ್ಗೆ ಮತ್ತು ಅಲ್ಲಿನ’ ಧರ್ಮಾಧಿಕಾರಿಗಳ ಬಗ್ಗೆ ಅತೀವವಾದ ಗೌರವ ಹಾಗೂ ಭಕ್ತಿಯನ್ನು ಇಟ್ಟಿಕೊಂಡಿರುತ್ತೇವೆ, ಯಾರೋ ಕೆಲವರು ದುಷ್ಟ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕ್ಷೇತ್ರದ ಹೆಸರನ್ನು ಹಾಳು ಮಾಡುವುದಕ್ಕೋಸ್ಕರ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕೆಗಳಲ್ಲಿ, ಟಿ.ವಿ ಮಾಧ್ಯಮಗಳಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಅನಧೀಕೃತವಾಗಿ ಹೂತುಹಾಕಿದ್ದಾರೆಂದು ಅಪಪ್ರಚಾರದಲ್ಲಿ ತೊಡಗಿದೆ.
ಇಂತಹ ವ್ಯಕ್ತಿಗಳ ಆರೋಪದಲ್ಲಿ ಯಾವುದೇ ರೀತಿಯ ಸತ್ಯಾಂಶ ಇರುವುದಿಲ್ಲ. ಶ್ರೀ ಕ್ಷೇತ್ರದ ಕುರಿತು ಅಪಪ್ರಚಾರ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಪರವಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಮಂಜುನಾಥ ಗಣಪತಿ ನಾಯ್ಕ ಸೋಡಿಗದ್ದೆ, ಶ್ರೀಧರ ನಾಯ್ಕ ವೆಂಕ್ಟಾಪುರ, ಮಂಜುನಾಥ ನಾಗಪ್ಪ ಗೊಂಡ ಜಾಲಿ, ರಾಜು ಕೆ ಮೊಗೇರ ಹೆರ್ತಾರ, ಭರತ ಮೊಗೇರ ಬೆಳ್ನಿ ಮತ್ತಿತರರು ಹಾಜರಿದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ