ಕಾರವಾರ : ಅಂಕೋಲಾ ತಾಲೂಕಿನ ಕೇಣಿಯಲ್ಲಿ ಖಾಸಗಿ ಮೂಲದ ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ರಾಷ್ಟ್ರೀಯ ಮೀನುಗಾರರ ಸಂಘಟನೆ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಈ ಸಂಬಂಧದ ಅಹವಾಲು ಸಭೆಯಲ್ಲಿ ಸ್ಥಳೀಯ ಮೀನುಗಾರರಿಗೆ,ರೈತರಿಗೆ ತಮ್ಮ ಅಹವಾಲು ಸಲ್ಲಿಸಲು ಮುಕ್ತ ಅವಕಾಶ ಮಾಡಿಕೊಡಬೇಕೆಂದು ಸಂಘಟನೆಯ ರಾಜ್ಯಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
ಕೇಣಿ ಬಂದರು ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ,ಪರಿಸರ ಮತ್ತು ಜೀವ ವೈವಿದ್ಯತೆಗಳಿಗೆ,ಜನರ ಆರೋಗ್ಯಕ್ಕೆ ,ಜನರ ಜೀವನೋಪಾಯಕ್ಕೆ ಹಾನಿ ಆಗುತ್ತದೆಂದು ಮನವಿಯಲ್ಲಿ ಸಂಘಟನೆ ತನ್ನ ಆಕ್ಷೇಪ ಎತ್ತಿದೆ.ಜನವಸತಿ ಪ್ರದೇಶಗಳ ಸುತ್ತಮುತ್ತ ಕಬ್ಬಿಣದ ಅದಿರು,ಕಲ್ಲಿದ್ದಲು ಮುಂತಾದ ವಿವಿಧ ಸರಕುಗಳ ಸಂಗ್ರಹ ಸಂಸ್ಕರಣೆ,ಆಮದು-ರಪ್ತಿನಂತ ವಹಿವಾಟು ನಡೆಸುವುದನ್ನು ಕೇಂದ್ರ ಸರ್ಕಾರ 2017ರಲ್ಲೇ ಕೆಂಪು ಪಟ್ಟಿಗೆ ಸೇರಿಸಿದೆ.ರಾಜ್ಯ ಜೀವ ವೈವಿಧ್ಯ ಮಂಡಳಿಯು ಸಹ 2020 ರಲ್ಲಿ ಕೇಣಿ ಸುತ್ತಮುತ್ತಲಿನ ಸಮುದ್ರ ತೀರದ ಪ್ರದೇಶಗಳನ್ನು ವಿಶಿಷ್ಟ ಜೀವ ವೈವಿಧ್ಯಗಳ ತಾಣವೆಂದು ಗುರುತಿಸಿದೆ.
ಈ ಬಂದರುನಿರ್ಮಾಣದಿಂದ ಅವರ್ಸಾದಿಂದ ಗೋಕರ್ಣವರೆಗಿನ ಸುಮಾರು ಹತ್ತು ಸಾವಿರ ಮೀನುಗಾರರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಮೀನುಗಾರರಿಗೆ ಜೀವನಭದ್ರತೆ ಒದಗಿಸಿಕೊಡದೇ ಯೋಜನೆಯನ್ನು ಅನುಷ್ಠಾನ ಮಾಡುವದು ಮಾನವ ಹಕ್ಕುಗಳನ್ನು ದಮನಿಸುವದಾಗಿದೆ ಎಂದು ಸಂಘಟನೆ ತನ್ನ ಆತಂಕವನ್ನು ವ್ಯಕ್ತಪಡಿಸಿದೆ.
ಕಾರವಾರ ಮತ್ತು ಬೇಲೆಕೇರಿಯಲ್ಲಿ ಈಗಾಗಲೇ ಎರಡು ವಾಣಿಜ್ಯ ಬಂದರುಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ. ಅವುಗಳಿಗೆ ನಿರೀಕ್ಷಿತ ಮಟ್ಟದ ವಾಣಿಜ್ಯ ವಹಿವಾಟು ವ್ಯವಹಾರ ಇಲ್ಲದೇ ಅವು ಬೀಕೋ ಎನ್ನುವ ಸ್ಥಿತಿಯಲ್ಲಿದೆ. ಅವು ಹೊಂದಿರುವ ಗುರಿಯಲ್ಲಿ ಶೇ 35 ರಷ್ಟು ಸಾಧನೆ ಮಾಡಲು ಈವರೆಗೆ ಅವರಿಂದ ಸಾದ್ಯವಾಗಿಲ್ಲ.ಅಗತ್ಯವೆನಿಸಿದರೆ ಈಗ ಇರುವ ಯಾವುದಾದರೂ ಒಂದು ಬಂದರನ್ನು ಇನ್ನಷ್ಟು ಅಭಿವ್ರದ್ಧಿ ಪಡಿಸುವ ಮೂಲಕ ರಾಜ್ಯದ ಅಗತ್ಯವನ್ನು ಪೂರೈಸಲು ಸಾಧ್ಯವಿದೆ ಎಂದು ಅವರು ಪ್ರತಿ ಪಾದಿಸಿದ್ದಾರೆ.
ವಸ್ತುಸ್ಥಿತಿ ಹೀಗಿರುವಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಮತ್ತು ಪ್ರವಾಸೋದ್ಯಮಕ್ಕೆ ಪ್ರಶಸ್ತವಾಗಿರುವ ಜಿಲ್ಲೆಯಸುಂದರ ಪರಿಸರ ಸೂಕ್ಷ್ಮ ಕಡಲತೀರಗಳನ್ನು ಜಿಲ್ಲೆಯ ಕರಾವಳಿಯ ಧಾರಣಾಸಾಮರ್ಥ್ಯಕ್ಕೆ ಮೀರಿ ಅಭಿವ್ರದ್ಧಿಯ ನೆಪದಲ್ಲಿ ಅಗತ್ಯಕ್ಕಿಂತ ಹೆಚ್ಚುವಾಣಿಜ್ಯ ಬಂದರುನಿರ್ಮಿಸಲು ಅನಗತ್ಯವಾಗಿ ಖಾಸಗಿಯವರಿಗೆ ಪರಭಾರೆ ಮಾಡಲಾಗುತ್ತಿದೆ.ಕೇಣಿಯ ಹತ್ತಿರದಲ್ಲೇ ಸೀಬರ್ಡ ನೌಕಾನೆಲೆ ಇರುವುದರಿಂದ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದಲೂ ಇಂತಹ ಕ್ರಮ ಸರಿಯೇ? ಎನ್ನುವ ಪರಾಮರ್ಶೆ ಆಗಬೇಕೆಂದು ಅವರು ಜಿಲ್ಲಾ ಆಡಳಿತವನ್ನು ಆಗ್ರಹ ಪಡಿಸಿದ್ದಾರೆ.ಉದ್ದೇಶಿತ ಯೋಜನೆಯಿಂದ ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಸಂಪೂರ್ಣ ನಶಿಸಲಿದೆ.ಹಲವು ಸಾವಿರ ಮೀನುಗಾರರು ,ರೈತರು,ತಮ್ಮ ಜೀವನೋಪಾಯವನ್ನು ಕಳೆದುಕೊಂಡು ಬೀದಿಗೆ ಬರುವ ಅಪಾಯ ಇದೆ.ಪರಿಸರ,ಜೀವ ವೈವಿಧ್ಯತೆಗಳಿಗೆ,ಮೀನುಗಾರಿಕೆ ಮತ್ತು ಮೀನುಗಾರರ ಜೀವನೋಪಾಯದ ಹಿತದೃಷ್ಟಿಯಿಂದ ಉದ್ದೇಶಿಸಿತ ವಾಣಿಜ್ಯ ಬಂದರುನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಅವರು ಒತ್ತಾಯ ಪಡಿಸಿದ್ದಾರೆ.ಯೋಜನೆಯನ್ನು ಅನುಷ್ಠಾನಿಸುವ ಹಠಕ್ಕೆ ಬಿದ್ದು,ವಿವಿಧ ಆಮೀಷಗಳ ಮೂಲಕ ಅಭಿವ್ರದ್ದಿಯ ಕನಸನ್ನು ಬಿತ್ತುವದು ಸುಲಭ.
ಆದರೆ ಕೇವಲ ಭರವಸೆಗಳಿಂದ ಜನರ ಬದುಕು ಸರಿಹೋಗಲಾರದು.ನಾವು ಸ್ಥಳೀಯ ಪ್ರಮುಖರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಉದ್ದೇಶಿತ ಯೋಜನೆಯಿಂದ ಸ್ಥಳೀಯ ಪರಿಸರಕ್ಕೆ,ಮೀನುಗಾರಿಕೆಗೆ,ಜನರ ಜೀವನೋಪಾಯಕ್ಕೆ ಆಗುವ ತೊಂದರೆಗಳ ಕುರಿತು ವಿವರಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಅನುಷ್ಠಾನಕ್ಕೆ ತಂದಿರುವ ಸೀಬರ್ಡ ನೌಕಾನೆಲೆ ಕಾರವಾರ, ಬೇಲೇಕೇರಿಯ ವಾಣಿಜ್ಯ ಬಂದರುಗಳು ,ಕೈಗಾ,ಕಾಳಿ,ಶರಾವತಿ, ಮುಂತಾದ ವಿದ್ಯುತ ಯೋಜನೆಗಳಿಂದ ಅರಣ್ಯ,ಪರಿಸರ ನಾಶ ಮತ್ತು ನಿರಾಶ್ರಿತರಾದವರ ಬವಣೆ, ಉದ್ದೇಶಿತ ಯೋಜನೆಯಿಂದ ಮೀನುಗಾರರ ಜೀವನೋಪಾಯಕ್ಕೆ ಪರಿಸರಕ್ಕೆ,ಜೀವ ವೈವಿಧ್ಯತೆಗಳಿಗೆ ಆಗುವ ಹಾನಿಯ ಕುರಿತು ಮೀನುಗಾರಿಕೆಯ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮ ಕುರಿತು ವಿವರಿಸಿ ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಮೀರಿ ಅಗತ್ಯಕ್ಕಿಂತ ಹೆಚ್ಚುವಾಣಿಜ್ಯ ಬಂದರುನಿರ್ಮಿಸುವ ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಕೈಬಿಡುವಂತೆ ಮನವಿ ಮಾಡಿದ್ದೇವೆ.
ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಯ ಮೇಲೆ ದುಷ್ಪರಿಣಾಮ ಬೀರುವ ಕುರಿತು ಜಿಲ್ಲೆಯ ಪರಿಸರ,ಜೀವ ವೈವಿಧ್ಯತೆ,ಮತ್ತು ಮೀನುಗಾರರ ಜೀವನೋಪಾಯಕ್ಕೆ ಇರುವ ಆತಂಕದ ಕುರಿತು ಮತ್ತು ಜನರ ಬೇಡಿಕೆಯ ಕುರಿತು ನೈಜ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಂಘಟನೆಯು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹ ಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ