ಹೊನ್ನಾವರ: ತಾಲೂಕಿನ ಪಟ್ಟಣ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಹೊಂಡ ಬಿದ್ದಿದ್ದು, ಸಾರ್ವಜನಿಕರು ಸಂಚಾರ ಮಾಡಲಾಗದ ಪರಿಸ್ಥಿತಿ ತಲುಪಿದ್ದು, ಚರಂಡಿಯಲ್ಲಿ ನೀರು ತುಂಬಿ ಕೊಳೆತು ನಾರುತ್ತಿದೆ. ಹೌದು..ಪಟ್ಟಣ ವ್ಯಾಪ್ತಿಯ ಕೆಲವೆಡೆ ಒಂದು ಸುತ್ತು ಹಾಕಿದರೆ ಹಲವು ಸಮಸ್ಯೆ ಕಣ್ಣಿಗೆ ಬೀಳುತ್ತದೆ. ಪಟ್ಟಣದ ಕೆ.ಎಚ್.ಬಿ ಕಾಲೋನಿ ರಸ್ತೆಯಲ್ಲಿ ಹಿಂದೆ ಹಾಕಿದ ಡಾಂಬರ್ ಹುಡುಕಿದರು ಸಿಗದಷ್ಟು ರಸ್ತೆ ಹಾಳಾಗಿದ್ದು, ಡಾಂಬರ್ ರಸ್ತೆಯೋ ಅಥವಾ ಮಣ್ಣಿನ ರಸ್ತೆಯೋ ಅನ್ನುವ ಅನುಮಾನ ಬರುತ್ತಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಮಣ್ಣು ಸುರಿಯಲಾಗಿದೆ. ಹೊಂಡಕ್ಕೆ ಕಲ್ಲು ಹಾಕಿ ಮುಚ್ಚಿದ್ದಾರೆ. ಕೆಲವೆಡೆ ದೊಡ್ಡ ಹೊಂಡ ಬಿದ್ದಿದೆ.
ಈ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ಹೆಚ್ಚಿನದಾಗಿ ನೌಕರರು, ನಿವೃತ್ತಿ ಹೊಂದಿದವರು, ಸುಶಿಕ್ಷಿತರೆ ಹೊಂದಿರುವ ಈ ಪ್ರದೇಶದ ಜನರು ನಿತ್ಯ ಸಂಚಾರಕ್ಕೆ ಸರ್ಕಸ್ ಮಾಡಬೇಕಿದೆ. ಮಳೆ ಬಂದರೆ ಕೇಸರು ನೀರಿನ ಅಭಿಷೇಕ ಅನಿವಾರ್ಯವಾಗಿದೆ. ಪ. ಪಂ. ಐದು ವರ್ಷ ಕಳೆಯುವಷ್ಟರಲ್ಲಿ ನಾಲ್ಕು ಅಧ್ಯಕ್ಷರನ್ನು ಕಂಡಿದೆ. ಅಧ್ಯಕ್ಷರ ಬದಲಾವಣೆಗೆ ವಹಿಸಿದಷ್ಟು ಆಸಕ್ತಿ, ಸ್ಥಳೀಯ ಸಮಸ್ಯೆ ಬಗೆಹರಿಸಲು ಮುಂದಾದರೆ ಓಡಾಡುವ ರಸ್ತೆಯಾದರು ಸರಿಯಾಗುತ್ತಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಇನ್ನೂ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಮೂತ್ರಖಾನೆಗೆ ಹೋಗಿದ್ದರೇ ಮೂಗು ಮುಚ್ಚಿಸುತ್ತಿದೆ. ಇನ್ನೂ ದುರ್ಗಾಕೇರಿಯಲ್ಲಿರುವ ಮೂತ್ರಖಾನೆಯ ಪಕ್ಕದಲ್ಲಿ ಕಸದ ರಾಶಿ ಪ. ಪಂ.ಕ್ಕೆ ಬೆರಳು ತೋರಿಸುತ್ತಿದೆ. ಇನ್ನೂ ಕಮಟೆಹಿತ್ತಲ, ಕರ್ಕಿಕೋಡಿ ಹೋಗುವ ರಸ್ತಿ, ಜಡ್ಡಿಕೇರಿ ಹೋಗುವ ರಸ್ತೆ, ರಾಮಮಂದಿರ ಹತ್ತಿರದಲ್ಲಿ, ಬಸ್ ನಿಲ್ದಾಣದ ಎದುರಿಗೆ, ಬಂದರ ರಸ್ತೆಯಲ್ಲಿ ಹೊಂಡದ್ದೆ ಕಾರುಬಾರು ಆಗಿದೆ. ಇದರ ಹೊರತಾಗಿ ಇನ್ನೂ ಕೆಲವು ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.
ಕರ್ಕಿಕೊಡಿ ರುಕ್ಮಿಣಿ ದೇವಸ್ಥಾನ ಎದುರುಗಡೆ ರಸ್ತೆ ಸಂಪೂರ್ಣ ಹಾಳಾಗಿದ್ದು ಜನರಿಗೆ ತಿರುಗಾಡಲು ತುಂಬಾ ತೊಂದರೆ ಆಗುತ್ತಿದೆ. ಕೇವಲ 120 ಮೀಟರ್ ಕಾಂಕ್ರೀಟ್ ಸಿಮೆಂಟ್ ರಸ್ತೆ ನಿರ್ಮಾಣ ಆದರೆ ಅಲ್ಲಿಯ ಸಮಸ್ಯೆ ಬಗೆಹರಿಯಲಿದೆ. ಬೆಳಕು ಬಿಡುವಷ್ಟರಲ್ಲಿ ಪೌರ ಕಾರ್ಮಿಕರಿಂದ ಸ್ವಚ್ಛ ಮಾಡುವ ಕೆಲಸ ನಡೆಯುತ್ತದೆ. ನಂತರ ಕಸ ಸಾಗಾಣಿಕೆ ವಾಹನ ಬರುತ್ತದೆ. ಇಷ್ಟೆಲ್ಲ ಸೌಲಭ್ಯ ಇದ್ದರು, ದುರ್ಗಾಕೇರಿಯ ಮೂತ್ರಖಾನೆ ಸಮೀಪ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ ಬಿದ್ದಿದ್ದು, ಗಬ್ಬುನಾಥ ಎದ್ದಿದೆ. ಮನೆಯಲ್ಲಿ ಬಳಸಿದ ಅಡುಗೆ, ಮಕ್ಕಳು ಬಳಸಿದ ಪ್ಯಾಡ್ ಇನ್ನಿತರ ವಸ್ತುಗಳನ್ನು ಬಳಸಿ ಬಿಸಾಕಿದ್ದಾರೆ. ಇಲ್ಲಿರುವ ಮೂತ್ರಖಾನೆ ಜಿರ್ಣಾವಸ್ಥೆ ತಲುಪಿದ್ದು, ಅದರ ನೀರು ರಸ್ತೆಗೆ ಹರಿದು ಬರುವುದೊಂದು ಬಾಕಿ ಇದೆ. ಪಟ್ಟಣದಲ್ಲಿ ಮೂತ್ರಖಾನೆಯನ್ನು ಆಗಾಗ ಸ್ವಚ್ಛಗೊಳಿಸಿದರೂ, ಕಟ್ಟಡ, ಅಲ್ಲಿಯ ಪೈಪ್ ಜೋಡಣೆ ಎಲ್ಲವು ಹಾಳಾಗಿದೆ. ಸುತ್ತ ಮುತ್ತ ಕಾಲು ಇಡಲು ಆಗದಷ್ಟು ಗಬ್ಬುನಾಥ ಎದ್ದುಕಾಣುತ್ತಿದೆ.
ಇನ್ನೂ ಬಂದರು ರಸ್ತೆಯಿಂದ ಗ್ಯಾಸ್ ಆಫೀಸ್ ಹೋಗುವ ರಸ್ತೆ ಪಕ್ಕದ ಗಟಾರದಲ್ಲಿ ನೀರು ತುಂಬಿ ಗಬ್ಬುನಾರುತ್ತಿದೆ. ಚರಂಡಿಗೆ ಬರುವ ನೀರು ಮುಂದೆ ಸಾಗದೆ ತುಂಬಿಕೊಂಡಿದೆ. ಅದರಲ್ಲಿ ಒಂದಿಷ್ಟು ಕಸ ತುಂಬಿಕೊಂಡಿದ್ದು, ಗಬ್ಬೆದ್ದ ವಾಸನೆ ರೋಗ ಹರಡುವ ಭೀತಿ ಸಾಧ್ಯತೆಯಿದೆ.
ಒಟ್ಟಾರೆ ಪಟ್ಟಣದ ಸುತ್ತ ಒಂದಲ್ಲ ಒಂದು ಸಮಸ್ಯೆ ಎದ್ದು ಕಾಣುತ್ತಿದೆ. ಬಗೆಹರಿಸಬೇಕಾದವರು ಆಸಕ್ತಿ ತೋರುತ್ತಿಲ್ಲವಾ? ಅಥವಾ ಅನುದಾನ ಕೊರತೆ ಇದೆಯಾ ಗೊತ್ತಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಕದ ಕ್ಷೇತ್ರದವರೆ ಆಗಿದ್ದರು ಸಂಬಂಧ ಪಟ್ಟವರು ಅವರನ್ನು ಭೇಟಿಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದಂತಿಲ್ಲ. ವಾಟರ್ ಪಾರ್ಕ್ ಗೆ ನೀರು ಕೊಡಲು, ಪ. ಪಂ. ಅಧ್ಯಕ್ಷ ಬದಲಾವಣೆಗೆ ಒಗ್ಗಟ್ಟು ತೋರುವ ಸದಸ್ಯರು ಅಭಿವೃದ್ಧಿ ದೃಷ್ಟಿಯಲ್ಲಿಯು ಒಟ್ಟಾಗಬೇಕಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ