ಶಿರಸಿ: ಕಳೆದ ಕೆಲ ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕುಮಟಾ ಶಿರಸಿ ರಸ್ತೆಯ ಬೆಣ್ಣೆಹೊಳೆ ಹಳ್ಳ ತುಂಬಿ ಹರಿದಿದ್ದು ಕುಮಟಾ-ಶಿರಸಿ ಭಾಗದ ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಕುಮಟಾ ಭಾಗದಿಂದ ಶಿರಸಿ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತವಾಗಿದೆ. ಈ ಹೆದ್ದಾರಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಸಂಬoಧ ಹಲವಾರು ಕಡೆಗಳಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಸೇತುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರ ಮಾಡಲು ಅವಕಾಶ ನೀಡಲಾಗಿತ್ತು.
ಆದರೆ ಇದೀಗ ಸುರಿದ ಭಾರೀ ಮಳೆಗೆ ಬೆಣ್ಣೆಹೊಳೆ ಹಳ್ಳ ತುಂಬಿ ಹರಿದಿದ್ದು ಸಂಚಾರಕ್ಕೆoದು ನಿರ್ಮಿಸಲಾಗಿದ್ದ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದಲ್ಲದೇ ಈ ಭಾಗದಲ್ಲಿ ಗುಡ್ಡ ಕುಸಿಯುವ ಆತಂಕವಿದ್ದು ತಾತ್ಕಾಲಿಕವಾಗಿ ಈ ಭಾಗದಲ್ಲಿ ತೆರಳುವ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ. ಸೇತುವೆ ಕಾಮಗಾರಿ ಸ್ಥಳದ ಪಕ್ಕದಲ್ಲಿ ತಾತ್ಕಾಲಿಕ ಸಂಚಾರ ವ್ಯವಸ್ಥೆಗಾಗಿ ಕಲ್ಪಿಸಿದ್ದ ಪರ್ಯಾಯ ರಸ್ತೆಯ ಮೇಲೆ ಬೆಣ್ಣೆ ಹೊಳೆಯ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ ಶಿರಸಿ ಕುಮಟಾ ರಸ್ತೆಯಲ್ಲಿ ಬ್ಯಾರೀಕೆಡ್ ಅಳವಡಿಸಿ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ತಾತ್ಕಾಲಿಕ ವಾಗಿ ನಿಷೇಧಿಸಲಾಗಿದ್ದು, ವಾಹನ ಸವಾರರು ಈ ರಸ್ತೆ ಯಲ್ಲಿ ಸಂಚರಿಸದoತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಈ ಭಾಗದ ನಾಗರಿಕರಿಗೆ ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಅಗತ್ಯ ನೆರವು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶಿರಸಿ-ಕುಮಟಾ ರಸ್ತೆ ಕಾಮಗಾರಿ ಕಳೆದ ಸುಮಾರು ಐದು ವರ್ಷಗಳಿಂದ ನಡೆಯುತ್ತಿದ್ದು ಇದುವರೆಗೆ ಪೂರ್ಣಗೊಂಡಿಲ್ಲ. ಸೇತುವೆ ಕಾಮಗಾರಿ ಸಂಬoಧ ಕಳೆದ ಕೆಲ ತಿಂಗಳಿoದ ಈ ಮಾರ್ಗದಲ್ಲಿ ಬಾರೀ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಎಲ್ಲಾ ರೀತಿಯ ವಾಹನಗಳಿಗೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಬ್ಯೂರೋ ರಿಪೋರ್ಟ ವಿಸ್ಮಯ ನ್ಯೂಸ್