ಕುಮಟಾ: ಮಿರ್ಜಾನ್ ಶಾಖಾಮಠದ ಪೂಜ್ಯರಾದ ನಿಶ್ಚಲಾನಂದನಾಥಜೀಯವರ ದಿವ್ಯ ಸಾನಿಧ್ಯದಲ್ಲಿ ಇಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲಿನಲ್ಲಿ ಶಾಲಾ ಪ್ರಾರಂಭೋತ್ಸವವನ್ನು ತುಂಬಾ ಸಡಗರದಿಂದ ಮಾಡಲಾಯಿತು. ತಳಿರು ತೋರಣಗಳಿಂದ ವಿದ್ಯಾಲಯವನ್ನು ಅಲಂಕರಿಸಿ, ಶಾಲೆಗೆ ಬಂದ ಮಕ್ಕಳು ಮತ್ತು ಪೋಷಕರಿಗೆ ಶಿಕ್ಷಕ ವೃಂದದವರು ಸಿಹಿವಿತರಿಸಿ, ತುಂಬಾ ಆದರದಿಂದ ಬರಮಾಡಿಕೊಂಡರು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಉದ್ಘಾಟಿಸಿದ ನಿಶ್ಚಲಾನಂದನಾಥ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಭಗವದ್ಗೀತೆ ಪುಸ್ತಕವನ್ನು ನೀಡುವುದರ ಮೂಲಕ ಆಶೀರ್ವದಿಸಿ, ಹೊಸ ಶೈಕ್ಷಣಿಕ ವರ್ಷ ತಮಗೆಲ್ಲರಿಗೂ ಒಳಿತುಂಟು ಮಾಡಲಿ ಎಂದು ಶುಭ ಹಾರೈಸಿದರು.
ಬಿಜಿಎಸ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಎಮ್. ಟಿ. ಗೌಡರವರು ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ತೆಗೆದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಮ್ಮ ಸಂಸ್ಥೆಯ ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಕ್ಕಳು ದೇವರ ಸಮಾನ, ಶಿಕ್ಷಕರು ಸಮಯ ಪಾಲನೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿ ಮಕ್ಕಳ ಏಳಿಗೆಗೆ ಶ್ರಮಿಸಬೇಕು ಎಂದರು.
ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಅರ್ಚನಾ ಭಟ್ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭಕೋರಿ, ಗಣ್ಯರನ್ನು ಸ್ವಾಗತಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಭಗವದ್ಗೀತೆ ಶ್ಲೋಕ ಪಠಿಸಿದರು.
ವಿಸ್ಮಯ ನ್ಯೂಸ್, ಕುಮಟಾ