ಅಂಕೋಲಾ: ಮಕ್ಕಳು ಊಟ, ತಿಂಡಿ, ನಿದ್ದೆ ಸರಿಯಾಗಿ ಮಾಡದಿದ್ದರೆ ಅಥವಾ ಬೇರೆ ಕಾರಣದಿಂದ ಹಠ ಹಿಡಿದರೆ ,ಮನೆಯ ಹಿರಿಯರು ಗುಮ್ಮ ಬಂತು ಗುಮ್ಮಎಂಬ ಮಾತು ಹೇಳಿ ಸಣ್ಣಹೆದರಿಕೆ ಹಾಕಿ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದನ್ನು ಕೆಲವೊಮ್ಮೆ ಕೆಲವೆಡೆ ಕೇಳಿದ್ದೇವೆ ನೋಡಿದ್ದೇವೆ.
ಆ ಗುಮ್ಮನ ಕಥೆ ಆಧುನಿಕತೆಯ ಇಂದಿನ ದಿನಗಳಲ್ಲಿ ಅಷ್ಟಾಗಿ ಕೇಳಿ ಬರದಿದ್ದರೂ ಗುಮ್ಮ ಎಂದೊಡನೆ ಅದೇನೋ ಕುತೂಹಲ ಹಲವರಲ್ಲಿರುತ್ತದೆ. ಗುಮ್ಮನ ಬಗ್ಗೆ ಸರಿಯಾಗಿ ತಿಳಿದಿರದ ಮತ್ತು ನೋಡಿರದ ಕೆಲ ಮಕ್ಕಳಿರುವ ಶಾಲೆಗೆ ಗುಮ್ಮ ಬಂದರೆ ಹೇಗಿರ ಬೇಡ?!

ಮಕ್ಕಳಲ್ಲಿ ಆತಂಕ ಮತ್ತು ಕುತೂಹಲ
ಅಂಕೋಲಾ ತಾಲೂಕಿನ ಬೇಳಾ ಬಂದರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಕೆಲ ದಿನಗಳಿಂದ ಗುಮ್ಮವೊಂದು ಆಗಾಗ ಕಾಣಿಸಿಕೊಂಡು,ವಿದ್ಯಾರ್ಥಿಗಳ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಶಾಲೆಗೆ ಬಂದಿದ್ದ ಈ ಅಪರೂಪದ ಗೂಬೆಯನ್ನು ಸ್ಥಳೀಯರಾದ ಉಮೇಶ್ ಮುಕುಂದ ನಾಯ್ಕ ಎನ್ನುವವರು ಸುರಕ್ಷಿತವಾಗಿ ಹಿಡಿದು, ಎ ಸಿ ಎಫ್ ಜಯೇಶ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.
ಸ್ಥಳೀಯ ಭಾಷೆಯಲ್ಲಿ ಗುಮ್ಮ ಎಂದು ಕರೆಸಿಕೊಳ್ಳುವ ಅಪರೂಪದ ಜೀವಸಂಕುಲಗಳಲ್ಲಿ , ಗೂಬೆಯೂ ಒಂದಾಗಿದ್ದು, ಅದರಲ್ಲಿ ಬೇರೆ ಬೇರೆ ರೀತಿಯವುಗಳನ್ನು ಕಾಣಬಹುದಾಗಿದ್ದರೂ, ಬೇಳಾ ಬಂದರಿನಲ್ಲಿ ಕಾಣಿಸಿಕೊಂಡ ಹೃದಯದಾಕಾರದ ಮುಖವುಳ್ಳ ಈ ಸುಂದರ ಬಣ್ಣದ ಗೂಬೆಯನ್ನು ಪಟ್ಟಣಿಗರು ಸೇರಿದಂತೆ ಹಲವರು ಕಣ್ತುಂಬಿಸಿಕೊಂಡರು.
ಗೂಬೆಯ ಬಗ್ಗೆ ನಂಬಿಕೆಗಳು
ಸ್ಥಳೀಯ ಹೆಸರಾಂತ ಯುವ ಉದ್ಯಮಿ ಸುಜಿತ ನಾರಾಯಣ ನಾಯ್ಕ ಎನ್ನುವವರೂ ಗೂಬೆಯ ಕೆಲ ಫೋಟೋಗಳನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಗೂಬೆ ಹಿಡಿದ ಸುದ್ದಿ ಕೇಳಿದ ಕೆಲವರು ಗೂಬೆ ಅಶುಭ ಕಾರಕ ಎಂದರೆ, ಇನ್ನು ಕೆಲವರು ಲಕ್ಷ್ಮೀಗೆ ಅತೀ ಪ್ರಿಯವಾದ ಪಕ್ಷಿ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಒಟ್ಟಿನಲ್ಲಿ ಶಾಲೆಗೆ ಬಂದಿದ್ದ ಅಪರೂಪದ ಗೂಬೆ ಸ್ಥಳೀಯರ ಮೂಲಕ ,ಅರಣ್ಯ ಇಲಾಖೆಯವರ ಕೈ ಸೇರಿ ಸುರಕ್ಷಿತ ವಾಗುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ