ಕುಮಟಾ: ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ, ಶಿಕ್ಷಕ ಆ ಮಗುವಿಗೆ ಜ್ಞಾನ ನೀಡಿ ಕಣ್ತೆರೆಯಿಸಿ ಒಳ್ಳೆಯ ಸಂಸ್ಕಾರ ರೂಪಿಸಿ ಮೂರ್ತ ಸ್ವರೂಪ ಕೊಟ್ಟು ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಕ ದಾರಿ ತೋರುತ್ತಾನೆ ಎಂದು ಶ್ರೀ ರಾಜೇಂದ್ರ ಭಟ್ಟ ಅಭಿಪ್ರಾಯಪಟ್ಟರು. ಅವರು ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಹಮ್ಮಿಕೊಂಡ ಶಿಕ್ಷಕ ದಿನಾಚರಣೆಯ ಅಂಗವಾಗಿ “ಶಿಕ್ಷಕ ರಾಷ್ಟ್ರ ರಕ್ಷಕ” ಕಾರ್ಯಕ್ರಮದ ದೀಪ ಪ್ರಜ್ವಲನ ನೆರವೇರಿಸಿ ಮಾತನಾಡಿದರು.
ಎಲ್ಲಾ ವೃತ್ತಿಗಿಂತ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು, ಒಂದು ಗಂಟೆ ಪಾಠ ಮಾಡಿದ ಶಿಕ್ಷಕ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುವ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಅರಳಿಸುತ್ತಾನೆ. ಆ ಕಾರಣಕ್ಕಾಗಿ ಅವನಿಗೆ ಸಂಪೂರ್ಣ ತೃಪ್ತಿ ದೊರೆಯುತ್ತದೆ. ಶಿಕ್ಷಕರಾದವರು ಪುಸ್ತಕದಲ್ಲಿರುವ ವಿಷಯವನ್ನು ವರ್ಗಾವಣೆ ಮಾಡುವುದಷ್ಟೇ ಅಲ್ಲ ವಿದ್ಯಾರ್ಥಿಗಳ ಮನಸ್ಸಿನ ಒಳಹೊಕ್ಕಿ ವಿಷಯ ಅರ್ಥೈಸುವ ಕೆಲಸ ಮಾಡಬೇಕು.
ನಿವೃತ್ತ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಸನ್ಮಾನ
ಶಿಕ್ಷಕ ನಿತ್ಯವೂ ಅಧ್ಯಯನ ಶೀಲನಾಗಿರಬೇಕು. ಹೊಸ ಹೊಸ ಜ್ಞಾನ ಸಂಪಾದಿಸಿ, ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವನ್ನು ನೀಗಿಸಬೇಕು. ಗುರುವಾದವನು ಗುರುತರವಾದ ಜವಾಬ್ದಾರಿ ಹೊಂದಿದ್ದು ತನ್ನ ವೃತ್ತಿಯನ್ನು ಗೌರವಿಸಿದಾಗ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಗು ಜ್ಞಾನ ಸಂಪಾದಿಸಲು ಬೇಕಾದಷ್ಟು ದಾರಿಗಳಿವೆ, ಸಂಪರ್ಕಗಳಿವೆ. ಆದ್ದರಿಂದ ಶಿಕ್ಷಕರು ಹೆಚ್ಚು ಜ್ಞಾನ ಸಂಪಾದಿಸಿ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಬೇಕು.
ಗುರು ಶಿಷ್ಯರ ಬಾಂಧವ್ಯ ಅನುಪಮವಾದದ್ದು. ವಿದ್ಯಾರ್ಥಿಗಳಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನು ಮರು ಸ್ಥಾಪಿಸಿ ಸಮಾಜಕ್ಕೆ ಮಾದರಿಯಾಗಬೇಕು. ಇದೊಂದು ಮಾದರಿ ಕಾರ್ಯಕ್ರಮ. ಈ ಅಪರೂಪದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೆದುರು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಒಳ್ಳೆಯ ಸಮಾಜವನ್ನು ನಿರ್ಮಿಸಿದಂತೆ. ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮೂಡಿ ಬಂದಾಗ ಒಳ್ಳೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಆಶಿಸಿ ವಿದ್ಯಾನಿಕೇತನ ಸಂಸ್ಥೆಯು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕರಾದ ಶ್ರೀ ಎಲ್.ಜಿ. ಭಟ್ಟ, ಶ್ರೀ ವಿ. ಜಿ. ಹೆಗಡೆ ಹಾಗೂ ಶ್ರೀಮತಿ ಶಾಂತಾ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಧ್ಯಕ್ಷರಾದ ಶ್ರೀ ಆರ್.ಜಿ.ಭಟ್ಟ ಅವರು ಮಾತನಾಡಿ, ಶಿಕ್ಷಕರು ರಾಷ್ಟ್ರನಿರ್ಮಾತೃರು, ಪವಿತ್ರ ವೃತ್ತಿಯಾಗಿರುವ ಶಿಕ್ಷಕ ವೃತ್ತಿ ಮಕ್ಕಳಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸುತ್ತದೆ.
ಶಿಕ್ಷಕರಾದವರು ನಿರಂತರ ಅಭ್ಯಾಸದ ಮೂಲಕ ಜ್ಞಾನ ಸಂಪಾದಿಸಬೇಕು. ಅಂತಹ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಕೇವಲ ಅಂಕಗಳಿಗೆ ಮಾತ್ರ ನೀಡದೇ ಉತ್ತಮ ಸಂಸ್ಕಾರ ರೂಪಿಸಿಕೊಳ್ಳಲು ನೆರವಾಗಬೇಕು. ಇಂದು ನಡೆದಿರುವ ಕಾರ್ಯಕ್ರಮ ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಉತ್ತಮ ಶಿಕ್ಷಕ
ಇದೇ ಸಂದರ್ಭದಲ್ಲಿ “ಜಿಲ್ಲಾ ಉತ್ತಮ ಶಿಕ್ಷಕ” ಪ್ರಶಸ್ತಿ ಪುರಸ್ಕೃತ ಶ್ರೀ ಜಿ.ಆರ್. ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಗತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ.ಎಂ.ಭಟ್ಟ ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಶಿಕ್ಷಣ ಸಮಿತಿಯ ಸಂಚಾಲಕ ಶ್ರೀ ಟಿ. ಆರ್. ಜೋಶಿ ಎಲ್ಲರನ್ನು ವಂದಿಸಿದರು. ಶಿಕ್ಷಕಿ ಶ್ರೀಮತಿ ಜಯಶ್ರೀ ಭಟ್ಟ ಹಾಗೂ ಮಾನಸಾ ಭಟ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪಾಲಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿತು. ವಿದ್ಯಾನಿಕೇತನ ಸಂಸ್ಥೆಯ ಸದಸ್ಯರು, ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್, ಕುಮಟಾ