ಅಂಕೋಲಾ: ಹಬ್ಬದ ದಿನದಂದೇ ಮನೆಯ ಹತ್ತಿರ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಭಾರೀ ಗಾತ್ರದ ಹೆಬ್ಬಾವನ್ನು ಹಿಡಿದು ಸಂರಕ್ಷಿಸುವ ಮೂಲಕ ಉರಗ ಸಂರಕ್ಷಕ ಮಹೇಶ ನಾಯ್ಕ್ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹೆಬ್ಬಾವು ಕಂಡರೆ ಒಮ್ಮೆ ಎಂಥವರೂ ಹೌಹಾರಲೇ ಬೇಕು. ಅಂತಹುದೇ ಒಂದು ಭಾರೀ ಗಾತ್ರದ ಹೆಬ್ಬಾವು ಅಂಕೋಲಾ ತಾಲೂಕಿನ ಬೆಲೇಕೇರಿ ಗ್ರಾಮದ ಮನೆಯೊಂದರ ಬಳಿ ಕಾಣಿಸಿಕೊಂಡು,ಮನೆಯ ಕುಟುಂಬಸ್ಥರು ಮತ್ತು ಅಕ್ಕ ಪಕ್ಕದವರರ ಆತಂಕಕ್ಕೆ ಕಾರಣವಾಗಿತ್ತು.
ಸ್ಥಳೀಯ ಯುವ ಪ್ರಮುಖ ಸಚಿನ್ ಅಸ್ನೋಟಿಕರ ಎನ್ನುವವರು ಈ ವಿಷಯವನ್ನು ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಫೋನ್ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮಹೇಶ್ ನಾಯ್ಕ , ಹೆಬ್ಬಾವನ್ನು ಲೀಲಾಜಾಲವಾಗಿ ಹಿಡಿದು ಚೀಲದೊಳಗೆ ಸೇರಿಸಿದ್ದಾರೆ. ಹೆಬ್ಬಾವು ರಕ್ಷಣಾ ಕಾರ್ಯಚರಣೆಗೆ ಸ್ಥಳೀಯರು ಸಹಕರಿಸಿದರು. ಈ ಮೂಲಕ ಹೆಬ್ಬಾವಿನ ಆತಂಕ ದೂರ ಮಾಡಲಾಯಿತು.
ನೂಲು ಹುಣ್ಣಿಮೆ ಮತ್ತು ರಕ್ಷಾಬಂಧನದಂತ ವಿಶೇಷ ಹಬ್ಬವಿದ್ದರೂ ಸಹ,ತಮ್ಮ ಮನೆಯ ಕೆಲಸ ಕಾರ್ಯಗಳನ್ನು ಬದಿಗಿಟ್ಟು,ಬೇಲೇಕೇರಿ ನಾಗರಿಕರ ಆತಂಕ ದೂರ ಮಾಡಲು ಮತ್ತು ಹೆಬ್ಬಾವಿನ ರಕ್ಷಣೆ ಸದುದ್ದೇಶದಿಂದ ಮಹೇಶ್ ನಾಯ್ಕ ನೀಡಿದ ವಿಶೇಷ ಸೇವೆ ಹಾಗೂ ಸಹಕಾರಕ್ಕೆ ಹಲವರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ