ಕುಮಟಾ: ತಾಲೂಕಾ ಆಡಳಿತ ಸೌಧದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಸಕರ ಕಾರ್ಯಾಲಯವನ್ನು ಇಂದು ಉದ್ಘಾಟನೆ ಮಾಡಲಾಯಿತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ರಿಬ್ಬನ್ ಕತ್ತರಿಸುವುದರ ಮೂಲಕ ಕಾರ್ಯಾಯವನ್ನು ಉದ್ಘಾಟಿಸಿದರು. ನಂತರ ಕಾರ್ಯಾಲಯದ ಒಳಗಡೆ ಪೂಜೆ ನೆರವೇರಿಸಿ ಸಿಹಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕುಮಟಾಕ್ಕೆ ಆಡಳಿತ ಸೌಧವನ್ನು ಮಂಜೂರಿ ಮಾಡಲಾಗಿತ್ತು. ಅಂದಿನ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಶಂಖುಸ್ಥಾಪನೆ ಮಾಡಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟಾ ಶ್ರೀವಾಸ ಪೂಜಾರಿಯವರು ಈ ಮಿನಿ ವಿಧಾನ ಸೌಧದ ಉದ್ಘಾಟನೆಯನ್ನು ನೆರವೇರಿಸಿದ್ದರು. ಅಂದಿನ ದಿನದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿನ್ನು ನಡೆಸಿದ್ದ ನಮ್ಮ ಲೋಕೋಪಯೋಗಿ ಇಲಾಖೆಯವರು ಈ ಒಂದು ಆಡಳಿತ ಸೌಧವನ್ನು ನಿರ್ಮಿಸಿ ಕೊಟ್ಟಿದ್ದಾರೆ.
ನಮ್ಮ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಆಡಳಿತ ಸೌಧ ನಮ್ಮ ಕುಮಟಾದಲ್ಲಿದೆ. ಪರಿಪೂರ್ಣ ವ್ಯವಸ್ಥೆಯನ್ನು ಹೊಂದಿರುವ ಸೌಧ ಇದಾಗಿದೆ. ಶಾಸಕರ ಕಾರ್ಯಾಲಯದ ಉದ್ಘಾಟನೆ ವಿಳಂಬವಾಗಿ ನಡೆದಿದೆ. ಅದರೂ ಸಹ ನಾನು ಪ್ರತೀ ದಿನ ಈ ಕಾರ್ಯಾಲಯಕ್ಕೆ ಬಂದು ನಮ್ಮ ಜನರ ಸಮಸ್ಯೆಗಳ ಅಹವಾಲನ್ನು ಸ್ವೀಕರಿಸಿ ಅವರ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕುಮಟಾ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬ್ಳೆ, ಪುರಸಭಾ ಅಧ್ಯಕ್ಷೆ ಸುಮತಿ ಭಟ್, ಉಪಾಧ್ಯಕ್ಷ ಮಹೇಶ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಜಿ. ಆಯ್. ಹೆಗಡೆ, ಪ್ರಮುಖರಾದ ಡಾ. ಜಿ.ಜಿ. ಹೆಗಡೆ. ಗಜಾನನ ಗುನಗಾ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಶಿಕ್ಷಣ ಪ್ರಕೋಷ್ಠದ ಎಮ್. ಜಿ. ಭಟ್, ಹೇಮಂತಕುಮಾರ್ ಗಾಂವ್ಕರ್, ಜಯಾ ಶೇಟ್, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ, ಸೂರ್ಯಕಾಂತ ಗೌಡ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಆಡಳಿತ ಸೌಧದ ವಿವಿಧ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ