ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಗೆ ಸಂಬoಧಿಸಿದoತೆ ಅಂಕೋಲಾ ಪೊಲೀಸರು 8 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಶಿರೂರು ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ಕಂಪನಿಯ ಬೇಜವಾಬ್ದಾರಿ ಕಾರಣ ಎಂದು ಈಡಿಗ ಮಹಾ ಮಂಡಲದ ಪ್ರಣವಾನಂದ ಸ್ವಾಮೀಜಿ ಅವರು ಅಂಕೋಲಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿತರ ಮೇಲೆ ಎಫ್. ಐ.ಆರ್ ದಾಖಲಿಸುವಂತೆ ಆದೇಶ ನೀಡಿತ್ತು.
ಆದರೆ ನ್ಯಾಯಾಲಯ ಆದೇಶ ನೀಡಿ 24 ದಿನಗಳು ಕಳೆದರೂ ಆರೋಪಿತರ ಮೇಲೆ ಅಂಕೋಲಾ ಪೊಲೀಸರು ಎಫ್.ಐ.ಆರ್ ದಾಖಲಿಸದಿರುವ ಕುರಿತು ಪ್ರಣವಾನಂದ ಸ್ವಾಮೀಜಿ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಸಂಬoಧಿಸಿದoತೆ ಸ್ಥಳೀಯ ಠಾಣೆ , ತಹಶೀಲ್ದಾರ ಕಾರ್ಯಾಲಯ ಇಲ್ಲವೇ ವಿಧಾನಸೌಧದ ಎದುರು, ನೊಂದ ಕುಟುಂಬ ವರ್ಗದವರೊಂದಿಗೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದರಲ್ಲದೇ ಈ ಕುರಿತು ಸ್ಥಳೀಯ ಸಿಪಿಐ ಹಾಗೂ ಪಿ ಎಸ್ ಐ ಅವರ ಜೊತೆ ಸಮಾಲೋಚಿಸಿ ಪ್ರಕರಣ ಯಾವ ಹಂತದಲ್ಲಿದೆ ಎಂದು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಪೋಲೀಸ್ ಅಧಿಕಾರಿಗಳು ಕೆಲ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಎಫ್ ಆಯ್ ಆರ್ ದಾಖಲಾಗುತ್ತಿದೆ ಎಂದಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ ಅವರು ಅಂಕೋಲಾಕ್ಕೆ ಭೇಟಿ ನೀಡಿ ಪ್ರಣವಾನಂದ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದ್ದು ಶಿರೂರು ಗುಡ್ಡ ಕುಸಿತಕ್ಕೆ ಸಂಬoಧಿಸಿದoತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಆರೋಪಿತರನ್ನು ಬಂಧಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದು , ಹಿರಿಯ ಅಧಿಕಾರಿಗಳ ಮಾತಿನ ಮೇಲೆ ಭರವಸೆ ಇಡುತ್ತೇನೆ ಎಂದು ಸ್ವಾಮೀಜಿ ತಿಳಿಸಿದರು.
ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ಅಂಕೋಲಾ ಪೊಲೀಸರು ವಿಳಂಬ ಮಾಡಿದ್ದು ನ್ಯಾಯಾಲಯದ ಆದೇಶ ಯಾವಾಗ ಕೈ ಸೇರಿದೆ ಎನ್ನುವ ಕುರಿತು ಮಾಹಿತಿ ಹಕ್ಕಿನಲ್ಲಿ ವಿವರ ಪಡೆಯುವುದಾಗಿ ಇದೇ ವೇಳೆ ತಿಳಿಸಿರುವ ಸ್ವಾಮಿಗಳು , ನ್ಯಾಯಾಂಗ ನಿಂದನೆ ಆಗಿದ್ದರೆ ಸಂಬoಧಿಸಿದವರ ಮೇಲೆ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ