ಭಟ್ಕಳ: ವೇಗವಾಗಿ ಬಂದ ಆಂಬ್ಯುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಟ್ಕಳ ಮೂಲದ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಶಾಂತಿನಗರದ ಕೆ. ಹೆಚ್. ರಸ್ತೆಯ ಸಂಗೀತಾ ಸಿಗ್ನಲ್ ಬಳಿ ಸಂಭವಿಸಿದೆ.
ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವ ಆರೋಪ ಕೇಳಿಬಂದಿದ್ದು, ದ್ವಿಚಕ್ರ ವಾಹನದಲ್ಲಿದ್ದ ಮೃತರನ್ನು ಇಸ್ಮಾಯಿಲ್ ನಾಥರ್ ದಾಬಾಪು (40) ಮತ್ತು ಅವರ ಪತ್ನಿ ಸಮೀನ್ ಬಾನು ಎಂದು ಗುರುತಿಸಲಾಗಿದೆ.ಇವರು ಭಟ್ಕಳದ ಬಂದರ್ ರೋಡ್ 2 ನೇ ಕ್ರಾಸ್ ನಿವಾಸಿಗಳಾಗಿದ್ದರು.
ರಿಚ್ಮಂಡ್ ರಸ್ತೆಯ ಕಡೆಯಿಂದ ವೇಗವಾಗಿ ಬಂದ ಆಂಬ್ಯುಲೆನ್ಸ್ ಚಾಲಕ, ಊರ್ವಶಿ ಚಿತ್ರಮಂದಿರ ಕಡೆಯಿಂದ ವಿಲ್ಸನ್ ಗಾರ್ಡನ್ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪಘಾತವೆಸಗಿದ್ದಾನೆ. ಅಲ್ಲದೆ ಆಂಬ್ಯುಲೆನ್ಸ್ ಕೆಳಗೆ ಸಿಲುಕಿದ್ದ ದ್ವಿಚಕ್ರ ವಾಹನವನ್ನು 20- 30 ಮೀಟರ್ ಎಳೆದುಕೊಂಡು ಚಲಾಯಿಸಿದ್ದಾನೆ. ಬಳಿಕ ಟ್ರಾಫಿಕ್ ಪೊಲೀಸ್ ಚೌಕಿಗೆ ಗುದ್ದಿ ಆಂಬ್ಯುಲೆನ್ಸ್ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಬಂದು ಆಂಬ್ಯುಲೆನ್ಸ್ ಪಲ್ಟಿ ಮಾಡಿ ಪರಿಶೀಲಿಸಿದಾಗ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಆಂಬ್ಯುಲೆನ್ಸ್ ಅಡಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಟ್ರಾಫಿಕ್ ಪೊಲೀಸ್ ಚೌಕಿಗೆ ಗುದ್ದುವ ಮುನ್ನ ಆಂಬ್ಯುಲೆನ್ಸ್ ಇನ್ನೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಸವಾರರಾದ ರಿಯಾನ್ ಹಾಗೂ ಸಿದ್ದಿಕ್ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಚಾಲಕ ಅಶೋಕ್, ಅಪಘಾತದ ನಂತರ ಪರಾರಿಯಾಗಿದ್ದರೂ, ಭಾನುವಾರ ಬೆಳಿಗ್ಗೆ ಪೊಲೀಸರ ಬಲೆಗೆ ಸಿಕ್ಕಿದ್ದಾನೆ.
ಘಟನೆಯ ಕುರಿತು ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ದಂಪತಿಗಳ ಪಾರ್ಥಿವ ಶರೀರವನ್ನು ಭಾನುವಾರ ರಾತ್ರಿ ಭಟ್ಕಳಕ್ಕೆ ತರಲಾಗಿದ್ದು, ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಂಪತಿಗಳು ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ












