ಅಂಕೋಲಾ: ಟ್ಯಾಂಕರ್ ಲಾರಿ ಮತ್ತು ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ಯಾಂಕರ್ ಚಾಲಕ ಮತ್ತು ಒರ್ವ ಬಸ್ ಪ್ರಯಾಣಿಕ ಸೇರಿ ಒಟ್ಟು ಇಬ್ಬರು ಸ್ಥಳದಲ್ಲೇ ಮೃತಪಟ್ಟು,ಸುಮಾರು 9 ಜನರು ಗಾಯನೋವುಗೊಂಡ ಧಾರುಣ ಘಟನೆ ತಾಲೂಕಿನ ಅಡ್ಲೂರ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಭವಿಸಿದೆ.
ಮಕ್ಕಿಗದ್ದೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ( ನೊಂದಣಿ ಸಂಖ್ಯೆ KA 31 F 1247) ಮತ್ತು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಸಾಗುತ್ತಿದ್ದ ಟ್ಯಾಂಕರ್ ಲಾರಿ ( KA 29 C 2998) ನಡುವೆ ಅಡ್ಲೂರಿನ ತರಂಗ ಹೊಟೇಲ್ ಎದುರು ಭೀಕರ ಅಪಘಾತ ಸಂಭವಿಸಿದ್ದು ಟ್ಯಾಂಕರ್ ಚಾಲಕ ಮುದ್ದೇಬಿಹಾಳ ನಿವಾಸಿ ಶರಣಪ್ಪ ಎಸ್ ಎನ್ನುವವರು ಸ್ಥಳದಲ್ಲೇ ಮೃತಪಟ್ಟಿದ್ದು , ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತಾಲೂಕಿನ ಕೇಣಿಯ ಭಾಸ್ಕರ ಗಾಂವಕರ್ ಎನ್ನುವವರು, ಸಹ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಬಸ್ ಚಾಲಕ ಅವರ್ಸಾ ದಂಡೇಭಾಗ ನಿವಾಸಿ ರತ್ನಾಕರ ನಾಯ್ಕ ಕಾಲಿಗೆ ಮತ್ತು ಇತರೆ ಸುಮಾರು
ಒಂಬತ್ತು ಜನ ಪ್ರಯಾಣಿಕರಿಗೆ ಸಹ ಗಾಯ ನೋವುಗಳಾಗಿದ್ದು, ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ತಾಲೂಕ ಆಸ್ಪತ್ರೆಗೆ ಸಾಗಿಸಿ, ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಕಾರವಾರಕ್ಕೆ ಸಾಗಿಸಲಾಗಿದೆ.
ಅಂಕೋಲಾ,ರಾಮನ ಗುಳಿ,ಗೋಕರ್ಣ,ಗುಳ್ಳಾಪುರ ಭಾಗದ ಅಂಬುಲೆನ್ಸ್ ಗಳನ್ನು ಸೇವೆಗೆ ಬಳಸಿಕೊಳ್ಳಲಾಗಿತ್ತು. ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಟ್ಯಾಂಕರ್ ಲಾರಿ ಚಾಲಕ ವಾಹನದ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು,ಎದುರಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಜೋರಾಗಿ ಡಿಕ್ಕಿ ಪಡಿಸಿದ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಬಸ್ ಪಲ್ಟಿ ಬಿದ್ದು, ಸಂಪೂರ್ಣ ಜಜ್ಜಿ ,ನುಜ್ಜು ಗುಜ್ಜಾಗಿ ಗುಜರಿಯಂತೆ ಕಂಡುಬರುತ್ತಿದೆ. ಪಿ ಎಸ್ ಐ ಗಳಾದ ಗುರುನಾಥ್ ಹಾದಿಮನಿ,ಪಿಎಸ್ಐ ಸುನಿಲ್ ಹುಲ್ಲೊಳ್ಳಿ ಸ್ಥಳಕ್ಕೆ ಭೇಟಿ ನೀಡಿ,ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.
ಹೆದ್ದಾರಿ ಗಸ್ತು ವಾಹನ ದ ಎಎಸ್ಐ ದೇವಿದಾಸ, ಸಿಬ್ಬಂದಿ ಉಮೇಶ, 112 ತುರ್ತು ವಾಹನ ಸಿಬ್ಬಂದಿಗಳು, ಹಾಗೂ ಪೋಲಿಸ್ ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು ,ಕರ್ತವ್ಯ ನಿರ್ವಹಿಸಿ ಹೆದ್ದಾರಿಯಲ್ಲಿ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕ್ರೇನ್ ಬಳಸಿ ಅಪಘಾತಗೊಂಡ ಎರಡೂ ವಾಹನಗಳನ್ನು ಹೆದ್ದಾರಿ ಅಂಚಿಗೆ ಎಳೆದೊಯ್ಯಲಾಯಿತು.
ಘಟನಾ ಸ್ಥಳದಿಂದ,ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಮೃತ ದೇಹ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ ಕನಸಿ ಗದ್ದೆಯ ವಿಜಯಕುಮಾರ್ ನಾಯ್ಕ್,ಬೊಮ್ಮಯ್ಯ ನಾಯ್ಕ ಸಹಕರಿಸಿದರು. ಗಣಪತಿ ನಾಯಕ್ ಮೂಲೆಮನೆ, ಮಂಜುನಾಯಕ ಸೇರಿದಂತೆ ಅಗಸೂರು ಅಡ್ಲೂರು ಹಾಗೂ ಸುತ್ತಮುತ್ತಲ ಸ್ಥಳೀಯ ನಾಗರಿಕರು, ಪ್ರಮುಖರು, ಇತರೆ ಕೆಲ ಹೆದ್ದಾರಿ ಸಂಚರಿಗಳು ಮಾನವೀಯ ನೆಲೆಯಲ್ಲಿ ಕೆಲ ಸೇವೆ, ಸಹಕಾರ ನೀಡಿದರು.
ಮಕ್ಕಿಗದ್ದೆ ಶಾಲಾ ಶಿಕ್ಷಕಿ ವೀಣಾ ವೆಂಕಟರಮಣ, ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಾದ ಪ್ರಜ್ಞಾ ಪ್ರದೀಪ ನಾಯ್ಕ ಅಲಗೇರಿ, ಪ್ರಜ್ಞಾ ಮಗಳು ಸಾನ್ವಿ,ಸಾವಿತ್ರಿ ದಾಾಕು ಗೌಡ ಒಕ್ಕಲ ಬೆಳಸೆ ,ರಕ್ಷಾ ರಾಘವೇಂದ್ರ ಬಾನಾವಳಿ ಅವರ್ಸಾ,ಬಸ್ಸಿನ ನಿರ್ವಾಹಕ ಚಂದ್ರಹಾಸ ನಾರಾಯಣ ನಾಯಕ ಕೋಡ್ಕಣಿ,ಶ್ರೀಧರ ಈಶ್ವರ ಹರಿಕಂತ್ರ ಬಳಲೆ,ರಾಧಾಕೃಷ್ಣ ಮಹಾಬಲೇಶ್ವರ ನಾಯ್ಕ ಮಕ್ಕಿಗದ್ದೆ ಮತ್ತು ಬಸ್ ಚಾಲಕ ರತ್ನಾಕರ ನಾಯ್ಕ ಅವರ್ಸ ಅವರು ಗಾಯಾಳುಗಳಾಗಿದ್ದಾರೆ.ಅಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಇನ್ನೊರ್ವ ಪ್ರಯಾಣಿಕ ಖಾಸಗಿ ವಾಹನದ ಮೂಲಕ ನೇರವಾಗಿ ಜಿಲ್ಲಾಸ್ಪತ್ರೆ ಕಾರವಾರಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು ಈ ಎಲ್ಲಾ ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿ ದಂತೆ ಆಲಿಕೆ ಸಭೆಗೆ ತೆರಳಿದ್ದ ಎಸ್ಪಿ ದೀಪನ್,ಅಂಕೋಲಾ ಅಪಘಾತದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಗೇರುಸೊಪ್ಪ ದಿಂದ ಹೊರಟು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಮತ್ತು ಅಡ್ಲೂರಿನ ಘಟನಾಸ್ಥಳಕ್ಕೆ ಭೇಟಿ ನೀಡಿದರು. ಸಿಪಿಐ ಚಂದ್ರಶೇಖರ್ ಮಠಪತಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿದ್ದು ಕರ್ತವ್ಯ ನಿರ್ವಹಿಸಿದರು.
ಅಂಕೋಲಾ ಸಾರಿಗೆ ಘಟಕದ ಅಧಿಕಾರಿ ಶಿವಾನಂದ ಮತ್ತಿತರರು ಸ್ಥಳ ಪರಿಶೀಲಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ