ಅಂಕೋಲಾ: ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಿಂದ ಪ್ರತಿದಿನದ ಜಾಗತಿಕ ಆಗು ಹೋಗುಗಳ ಜ್ಞಾನವನ್ನು ಅರಿಯಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದು ಕೇವಲ ಸಾಮಾಜಿಕ ಜಾಲತಾಣಗಳತ್ತ ಒಲವು ವ್ಯಕ್ತಪಡಿಸಿದೇ, ಓದುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಹಸೀಲ್ದಾರ ಡಾ.ಚಿಕ್ಕಪ್ನ ನಾಯಕ ಹೇಳಿದರು.
ಪಟ್ಟಣದ ಪಿ.ಎಂ.ಜ್ಯೂನಿಯರ್ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಪತ್ರಿಕಾ ಮಾಧ್ಯಮಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದ್ದು ಇದರಿಂದಾಗಿ ಇಂದಿನ ವಿದ್ಯಾರ್ಥಿ, ಯುವಜನರಲ್ಲಿ ಸಾಮಾಜಿಕ ಪರಿಜ್ಞಾನದ ಕೊರತೆ ಕಂಡು ಬರುತ್ತಿದೆ ಶೈಕ್ಷಣಿಕವಾಗಿ ಸಾಧನೆ ಮಾಡಿ ರ್ಯಾಂಕ್ ಪಡೆದರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನ ಅತ್ಯಗತ್ಯವಾಗಿದ್ದು, ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಭಂಡಾರವನ್ನು ಸಂಪಾದಿಸಬಹುದಾಗಿದೆ ಎಂದರು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅನಗತ್ಯ ಒತ್ತಡ, ನಕಾರಾತ್ಮಕ ಚಿಂತನೆ, ಇನ್ನೊಬ್ಬರೊಂದಿಗೆ ಹೋಲಿಕೆ ಮೊದಲಾದ ವಿಷಯಗಳಿಂದ ವಿಚಲಿತರಾಗುತ್ತಿರುವುದು ಹೆಚ್ಚುತ್ತಿದ್ದು, ಆತ್ಮಹತ್ಯೆಯಂತ ಕೃತ್ಯಗಳಿಗೆ ದಾರಿಯಾಗುತ್ತಿದೆ, ದುಡುಕಿನ ನಿರ್ಧಾರಗಳನ್ನು ಬಿಟ್ಟು ಉತ್ತಮ ವಿಷಯಗಳತ್ತ ಗಮನ ನೀಡುವ ಜೊತೆಗೆ ಕಲಿಕೆಗೆ ಮಹತ್ವ, ಕೊಡಬೇಕಾದ ಅಗತ್ಯತೆ ಇದೆ ಎಂದು ಅವರು ಕರೆ ನೀಡಿದರು.
ಸಮಸ್ಯೆಗೂ ಸಾವಿದೆ ! ಆತ್ಮಹತ್ಯೆ ಆಯ್ಕೆಯೇ ಅಲ್ಲ ಎನ್ನುವ ಕುರಿತು ವಿಶೇಷ ಉಪನ್ಯಾಸ
ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ, ಸಮಸ್ಯೆಗೆ ಸಾವಿದೆ : ಅತ್ಮಹತ್ಯೆ ಆಯ್ಕೆಯೇ ಅಲ್ಲ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿ ಯುವ ಜನರ ಮಾನಸಿಕ ಸದೃಢತೆ ಕುರಿತು ಮಾತನಾಡುತ್ತ, ಯುವ ಜನರಲ್ಲಿ ಆತ್ಮಹತ್ಯೆ ಎನ್ನುವುದು ಇಂದು ಜಾಗತಿಕ ಸಮಸ್ಯೆಯಾಗಿ ದಿನೇದಿನ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ.
ಇಂದು ಕುಟುಂಬದೊಂದಿಗೆ ಕಾಲ ಕಳೆಯುವುದು,ಪರಸ್ಪರ ಚರ್ಚಿಸುವುದು ಕಡಿಮೆಯಾಗುತ್ತಿದೆ . ಸಣ್ಣ ಸಮಸ್ಯೆ ಇದ್ದರೂ ಯಾರೊಂದಿಗೂ ಹೇಳಿಕೊಳ್ಳದೇ ಮನಸ್ಸಿನಲ್ಲಿ ಕೊರಗುವುದು ಆತ್ಮಹತ್ಯೆಯಂತ ಕೃತ್ಯಗಳಿಗೆ ದಾರಿಯಾಗುತ್ತಿದೆ.
ಯಾವುದೇ ಸಮಸ್ಯೆ ಇದ್ದರೆ ತಂದೆ ತಾಯಿಗಳೊಂದಿಗೆ, ತಮ್ಮ ಆಪ್ತರೊಂದಿಗೆ ಹೇಳಿಕೊಳ್ಳಿ, ಅಗತ್ಯ ಬಿದ್ದರೆ ಆಪ್ತ ಸಮಾಲೋಚನೆಗೆ ಆರೋಗ್ಯ ಇಲಾಖೆಯಲ್ಲಿ ವ್ಯವಸ್ಥೆ ಇದೆ ಆತ್ಮಹತ್ಯೆಯಂತ ಮಾರ್ಗ ಬೇಡ ಎಲ್ಲಾ ಸಮಸ್ಯೆಗಳಿಗೂ ಸಾವಿದೆ ಆತ್ಮಹತ್ಯೆ ಮಾರ್ಗವಲ್ಲ. ನಮ್ಮ ಇಲಾಖೆ ಈ ಕುರಿತು ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಪೂರಕ ಕಾರ್ಯಕ್ರಮ ಆಯೋಜಿಸಲಾಗಿರುವುದು ಇಲಾಖೆಯ ಕಾರ್ಯಕ್ರಮಗಳಿಗೆ ಬಲ ತಂದಿದೆ.

ಈ ಹಿಂದಿನ ಕೆಲ ಆಕಸ್ಮಿಕ ಸಾವು ಮತ್ತು ದುರಂತದಲ್ಲಿ ಮೃತಪಟ್ಟವರ ಬಗ್ಗೆ ಇಲ್ಲಿನ ಕೆಲ ಪರ್ತಕರ್ತರು ಮಧ್ಯಮ ಮಿತ್ರರು ನೀಡಿದ ಮಾಹಿತಿ, ತೋರಿದ ಸಾಮಾಜಿಕ ಕಳಕಳಿ ಅಭಿನಂದನೀಯ ಎಂದರು.
ಪಿ.ಎಂ.ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿ, ಯುವಜನರು ಮೊಬೈಲ್ ಎಂಬ ಕತ್ತಲ ಕೋಣೆಯಿಂದ ಹೊರಬಂದು ಸುಂದರ ವೈವಿಧ್ಯಮಯ ಪ್ರಪಂಚದತ್ತ ತಮ್ಮ ಗಮನ ನೀಡಬೇಕು ಇದು ಬದುಕುವ ಛಲವನ್ನು ಹೆಚ್ಚಿಸುತ್ತದೆ, ಸಾಧನೆಗೆ ಸ್ಪೂರ್ತಿಯಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ದೈವಜ್ಞ, ಕರಾವಳಿ ಉಸ್ತುವಾರಿ ಕುಮಾರ ನಾಯ್ಕ, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಶಂಕರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ಸಂಘಟನೆಗೆ ಶುಭ ಕೋರಿ, ಕೇಣಿ ಬಂದರು ವಿರೋಧಿ ಹೋರಾಟ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ನಮ್ಮ ಸಂಘಗಳು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲೂ ಧ್ವನಿ ಎತ್ತಿ ,, ಜನರ ಪರ ನಿಲ್ಲಲಿವೆ ಎಂದರು.
ವಿದ್ಯಾರ್ಥಿನಿಯರ ಸ್ವಾಗತ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಮಾರುತಿ ಹರಿಕಂತ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಸದಸ್ಯರುಗಳಾದ ವಿದ್ಯಾಧರ ಮೊರಬಾ, ವಿಲಾಸ ನಾಯಕ, ನಾಗರಾಜ ಶೆಟ್ಟಿ ಪರಿಚಯಿಸಿದರು, ಸುಪ್ರಿಯಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು, ಕಾರ್ಯದರ್ಶಿ ಕಿರಣ ಗಾಂವಕರ್ ವಂದಿಸಿದರು.
ಲೇಖನಿ ನೀಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರೆ, ಭಗವದ್ಗೀತೆಯನ್ನು ಪ್ರೀತಿಯ ನೆನಪನ ಕಾಣಿಕೆ ರೂಪದಲ್ಲಿ ನೀಡಲಾಯಿತು. ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ನೂತನ ಅಧ್ಯಕ್ಷ ಮತ್ತು ಸ್ವೀಟ್ ಸಾಗರ್ ಮಾಲಕ ರಮೇಶ ಪರಮಾರ , ವಿದ್ಯಾರ್ಥಿಗಳಿಗೆ ಸಿಹಿ ತಿನಿಸು ವಿತರಿಸಿದರು.
ಸಂಪರ್ಕ ಸಂಖ್ಯೆ ಕಾರ್ಡ್ ಬಿಡುಗಡೆ
ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಸೂರಜ ನಾಯ್ಕ, ಸುಪ್ರಿಯಾ ನಾಯ್ಕ ತಾಯಿ ಮತ್ತು ಸಹೋದರಿ, ಪರ್ತಕರ್ತ ನಾಗರಾಜ ಮಂಜಗುಣಿ, ಆರ್ಯ ನ್ಯೂಸ್ ನ ರಾಜು ಶೆಟ್ಟಿ, ಪ್ರಮುಖರಾದ ಮಹಾಂತೇಶ ರೇವಡಿ, ಬಿಂದೇಶ ನಾಯಕ ಹಿಚ್ಕಡ, ಮಹೇಶ ಗೌಡ ಬಡಗೇರಿ, ಮಂಜುನಾಥ ಇಟಗಿ, ವಸಂತ ನಾಯ್ಕ ಹೊನ್ನಿಕೇರಿ, ನಾರಾಯಣ ಬಿ ನಾಯಕ ಸೂರ್ವೆ, ವಕೀಲ ಉಮೇಶ ನಾಯ್ಕ, ಡಾ. ಸಂಜು ನಾಯಕ ಸೇರಿದಂತೆ ಇತರರು ಪಾಲ್ಗೊಂಡು ನೂತನ ಸಂಘಟನೆಗೆ ಶುಭ ಕೋರಿದರು.
ಕಾಲೇಜಿನ ಉಪನ್ಯಾಸಕ ರಮಾನಂದ ನಾಯಕ ಮತ್ತಿತರರು, ಗಣಪತಿ ಸೇರಿದಂತೆ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳಿದ್ದರು. ಸಂಘದ ಸದಸ್ಯರ ಮಾಹಿತಿ, ಸಂಪರ್ಕ ಸಂಖ್ಯೆ ಉಳ್ಳ ಕಾರ್ಡ ಬಿಡುಗಡೆಗೊಳಿಸಲಾಯಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ