ಅಂಕೋಲಾ: ಇತ್ತೀಚೆಗೆ ನಡೆದಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡದ ವಿಜಯವನ್ನು ಸಂಭ್ರಮಿಸುವಂತೆ,ಮೂಡಿ ಬಂದ ಗಣಪನ ಮಾದರಿ ದೃಶ್ಯ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ .
IPL ಕಪ್ ಎತ್ತಿ ಹಿಡಿದ ಗಣಪ
ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಸಾರ್ವಜನಿಕ ಗಣೇಶೋತ್ಸವ ತನ್ನ ಶಿಸ್ತು ಬದ್ಧ ಸಂಘಟನೆ ಮತ್ತಿತರ ಕಾರಣಗಳಿಂದ ಆಗಾಗ ಸಖತ್ ಸುದ್ದಿಯಾಗುತ್ತಲೇ ಇರುತ್ತದೆ. ಇಲ್ಲಿನ ಗಣೇಶೋತ್ಸವ ಮಂಡಳಿ 42 ನೇ ವರ್ಷದ ವಿಶೇಷ ಆಕರ್ಷಣೆಯಾಗಿ ರೂಪಿಸಿದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ ಸಿ ಬಿ ತಂಡದ ವಿಜಯೋತ್ಸವ ಮಾದರಿ ಗಮನ ಸೆಳೆಯುತ್ತಿದ್ದು ದಿನನಿತ್ಯ ಸಾವಿರಾರು ಜನರು ಆಗಮಿಸಿ ಗಣೇಶೋತ್ಸವದ ಆನಂದವನ್ನು ಸವಿಯುತ್ತಿದ್ದು, ಇಲ್ಲಿನ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾದ ಸದ್ದು ಮಾಡುತ್ತ, ಐಪಿಎಲ್ ಚಾಂಪಿಯನ್ ಕಪ್ ಎತ್ತಿ ಹಿಡಿದ ಗಣೇಶ ಮೂರ್ತಿ ಎಲ್ಲಡೆ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಜೊತೆಯಲ್ಲೇ ಆರ್‌ಸಿಬಿ ವಿಜಯೋತ್ಸವ ಗಣಪ
ಸ್ಥಳೀಯರೇ ಆದ ಹೆಸರಾಂತ ಯುವ ಕಲಾವಿದ ದಿನೇಶ ಮೇತ್ರಿ ಅವರ ಪರಿಕಲ್ಪನೆ ಮತ್ತು ಕಲಾತ್ಮಕತೆಯಿಂದ ಟ್ರಾನ್ಸಪೋರ್ಟ್ ಉದ್ಯಮಿ ತುಳಸಿದಾಸ ಕಾಮತ್ ಮತ್ತು ಅವರ ಕುಟುಂಬದವರ ಸಹಕಾರದಲ್ಲಿ ಐ.ಪಿ.ಎಲ್ ಟ್ರೊಪಿ ಎತ್ತಿ ಹಿಡಿದು, ಜಿಲ್ಲೆಯ ಪ್ರತಿಷ್ಠಿತ ವರದಾ ರೋಡಲೈನ್ಸ್ ಬಸ್ಸಿನ ಮೇಲೆರಿ ವಿಜಯೋತ್ಸವದ ರೀತಿ ನಿಂತ ಭಂಗಿಯಲ್ಲಿ ಇಲ್ಲಿನ ಗಣಪ ಮೂಡಿಬಂದಿದ್ದು ಆರ್.ಸಿ.ಬಿ ಜೆರ್ಸಿಯಲ್ಲಿ ಇರುವ
ನಿಂತ ಗಣೇಶನ ಪಕ್ಕದಲ್ಲಿ ವಿಶ್ವ ಪ್ರಸಿದ್ಧ ಆಟಗಾರ ವಿರಾಟ ಕೊಹ್ಲಿ ಅವರ ಕಲಾಕೃತಿಯೂ ಗಣೇಶನ ಭಕ್ತರ,ಕ್ರಿಕೆಟ್ ಪ್ರಿಯರ ಹಾಗೂ ಕೊಹ್ಲಿ ಅಭಿಮಾನಿಗಳ ಮನಸೂರೆಗೊಳ್ಳುತ್ತಿದೆ.
ಭಟ್ಕಳದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಗಣೇಶನ ವಾಹನ ಮೂಷಿಕ ,ಬಸ್ಸಿನ ಚಾಲಕನ ಸ್ಥಾನದಲ್ಲಿ ಕುಳಿತು ಬಿಳಿ ಬಣ್ಣದ ಸುಂದರ ಬಸ್ಸನ್ನು ಚಲಾಯಿಸುತ್ತಿರುವಂತೆ ಕಲಾತ್ಮಕತೆ ಕಂಡುಬರುತ್ತಿದೆ. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಂತೆ ಈ ಸಲ ಐಪಿಎಲ್ ಕಪ್ ತನ್ನದಾಗಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ,ಗೆಲುವಿನ ಸಂಭ್ರಮಾಚರಣೆಯ ವರುಷ ಹಾಗೂ ಹರುಷದ ಸಂದರ್ಭದಲ್ಲಿ ಸುಮಾರು ಹನ್ನೊಂದು ಅಡಿ ಎತ್ತರದ ಈ ವಿಶೇಷ ಗಣೇಶ ಮೂರ್ತಿ ತನ್ನ ವಿಭಿನ್ನತೆಯಿಂದಾಗಿ ಶೋಭಿಸುತ್ತಿದ್ದು ಆರ್.ಸಿ.ಬಿ ಅಭಿಮಾನಿಗಳಂತೂ ಸಂತಸದಿಂದ ಜಯದೇವತೆಯನ್ನು ನೋಡಲು ಮುಗಿ ಬೀಳುತ್ತಿದ್ದಾರೆ.
ಅವರ್ಸಾದಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರತಿ ವರ್ಷ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತ ಬಂದಿದ್ದು
ಗಣೇಶೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಸಾಂಸ್ಕೃತಿಕ , ಮನೋರಂಜನೆ ಸೇರಿದಂತೆ ಹತ್ತಾರು ವಿಧಾಯಕ ಕಾರ್ಯಗಳ ಮೂಲಕ ತನ್ನದೇ ಆದ ಪ್ರಸಿದ್ಧಿ ಪಡೆದಿದೆ.
ಈ ಬಾರಿಯ ಗಣೇಶೋತ್ಸವದಲ್ಲಿ ಮೂಡಿಬಂದ ಆರ್.ಸಿ.ಬಿ ವಿಜಯೋತ್ಸವದ ಮಾದರಿಯಂತಿರುವ ಗಣಪ ರಾಜ್ಯಾದ್ಯಂತ ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಸಖತ್ ಸುದ್ದಿ ಮಾಡುವಂತಾಗಿದ್ದು,ಸ್ಥಳೀಯ ಸಂಘಟನೆ ಹಾಗೂ ಕಲಾವಿದನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರಲಾರಂಭಿಸಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ