ಅಂಕೋಲಾ, ಆಗಸ್ಟ್ 28: ಗ್ರಾಮೀಣ ಪ್ರದೇಶದ ರೈತ ಕುಟುಂಬವೊoದರ ಮನೆಯ ಹತ್ತಿರದ ತೋಟದ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ತೋಟದ ಕೆಲಸಗಾರರು ಮನೆಯ ಯಜಮಾನಿಗೆ ತಿಳಿಸಿದರಾದರೂ ಮನೆ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಕುಟುಂಬ ವರ್ಗದವರು ದೈವ ದರ್ಶನಕ್ಕೆ ದೂರದೂರಿಗೆ ಹೋಗಿದ್ದರಿಂದ ಆತಂಕ ಹೆಚ್ಚುವಂತಾಗಿತ್ತು.
Read: ಮುರ್ನಾಲ್ಕು ದಿನಗಳ ಕಾಲ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಏನು?
ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗಾರ ಪುನರ್ವಸತಿ ಕೇಂದ್ರದ ರಾಘವೇಂದ್ರ ಗಾಂವ್ಕರ್ ಅವರ ಮನೆಗೆ ಹೊಂದಿಕೊoಡಿರುವ ತೋಟದ ಗಿಡ ಗಂಟಿಗಳ ಪೊದೆಯಲ್ಲಿ ಹೆಬ್ಬಾವು ಅವಿತುಕೊಂಡಿತ್ತು. ಗಮನಸಿದ, ಅಲ್ಲೇ ಕೆಲಸ ಮಾಡುತ್ತಿದ್ದ ಕೃಷಿ ಕೂಲಿ ಕಾರ್ಮಿಕರು ಕ್ಷಣ ಕಾಲ ಗಾಬರಿಗೊಂಡು ಮನೆಯೊಡತಿಗೆ ವಿಷಯ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಕಾರ್ಯಾಚರಣೆ
ಆದರೆ ಆ ಸಂದರ್ಭದಲ್ಲಿ ಮನೆ ಮಕ್ಕಳು ಸೊಸೆಯಂದಿರು ಮತ್ತು ಮೊಮ್ಮಕ್ಕಳು ಶಿರಡಿ ಮತ್ತಿತರ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರಿಂದ ತುರ್ತಾಗಿ ಏನು ಮಾಡುವುದು ಎಂದು ಯೋಚನೆಗೆ ಬಿದ್ದು, ಕೊನೆಗೆ ದೂರವಾಣಿ ಕರೆ ಮಾಡಿ ಮಗನಿಗೆ ತಿಳಿಸಿದ್ದಾರೆ.
ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗಿದ್ದ ಮಗ ಅಲ್ಲಿಂದಲೇ, ವಲಯ ಅರಣ್ಯಾಧಿಕಾರಿ ಸುರೇಶ್ ನಾಯ್ಕ ಅವರಿಗೆ ಕರೆ ಮಾಡಿ ತಮ್ಮ ತೋಟದಲ್ಲಿ ಹೆಬ್ಬಾವು ಬಂದಿರುವ ವಿಷಯ ತಿಳಿಸಿ,ತಾಯಿಯವರ ಆತಂಕ ದೂರ ಮಾಡುವಂತೆ ವಿನಂತಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ
ಸುರೇಶ ನಾಮಕ ಅವರು ಕೂಡಲೇ ಫೋನ್ ಕರೆಗೆ ಸ್ಪಂದಿಸಿ, ತಮ್ಮ ಸಿಬ್ಬಂದಿಗಳನ್ನು ಹೆಬ್ಬಾವು ಸೆರೆ ಮತ್ತು ಸಂರಕ್ಷಣೆ ಕಾರ್ಯಚರಣೆಗೆ ಕಳಿಸಿಕೊಟ್ಟಿದ್ದಾರೆ. ಸ್ಥಳೀಯ ಪಂಚಾಯತ ಸದಸ್ಯರಾದ ನಾರಾಯಣ ಭಟ್ಟ ಮತ್ತಿತರರ ಸಹಕಾರದಲ್ಲಿ ಹೆಬ್ಬಾವನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ.
ಮನೆಮಕ್ಕಳು ದೂರದಲ್ಲಿದ್ದರೂ ತಕ್ಷಣಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕರ್ತವ್ಯ ಹಾಗೂ ಸೇವೆಗೆ ಗಾಂವಕರ ಕುಟುಂಬಸ್ಥರು ಮತ್ತು ಸ್ಥಳೀಯ ನಾಗರಿಕರು ಕೃತಜ್ಞತೆ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ