ಭಟ್ಕಳ: ಮಹಾಶಿವರಾತ್ರಿಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಮುರುಡೇಶ್ವರಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ ಹೇಳಿದರು.
ತಾಲೂಕಿನ ನೆಹರು ರಸ್ತೆಯಲ್ಲಿರುವ ರಂಜನ್ ಗ್ಯಾಸ್ ಏಜೆನ್ಸಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಪತ್ರಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ 14 ವರ್ಷಗಳಿಂದ ರಂಜನ್ ಗ್ಯಾಸ್ ಏಜೆನ್ಸಿ ನೇತ್ರತ್ವದಲ್ಲಿ ಮಹಾಶಿವರಾತ್ರಿಯಂದು ಮುರುಡೇಶ್ವರಕ್ಕೆ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ಪೆಬ್ರವರಿ 26 ರಂದು 15 ನೇ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯು ಬೆಳಿಗ್ಗೆ 4 ಗಂಟೆಗೆ ಭಟ್ಕಳದ ಚೋಳೆಶ್ವರ ದೇವಸ್ಥಾನದಿಂದ ಪ್ರಾರಂಭವಾಗುತ್ತದೆ.
ಈ ವರ್ಷದ ಪಾದಯಾತ್ರೆಯನ್ನು ಇತ್ತೀಚಿಗೆ ನಿಧನರಾದ, ಕಳೆದ 14 ವರ್ಷಗಳಿಂದ ನಮ್ಮ ಜತೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ ಮಾರುತಿ ದೇವಾಡಿಗರ ನೆನಪಿನಲ್ಲಿ ಮಾಡುತ್ತಿದ್ದೇವೆ. ಪಾದಯಾತ್ರೆಯ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ವತಿಯಿಂದ ಹಣ್ಣು ಹಂಪಲು, ಒಣ ಹಣ್ಣುಗಳು, ನೀರಿನ ವ್ಯವಸ್ಥೆಯನ್ನು ಮಾಡುತ್ತೇವೆ. ಪಾದಯಾತ್ರೆಗೆ ತೆರಳುವಾಗ ರಾತ್ರಿ ಇರುವ ಕಾರಣಕ್ಕೆ ಸುರಕ್ಷತೆಯ ದೃಷ್ಟಿಯಿಂದ ಪೋಲಿಸ್ ಗಸ್ತು ಇರುತ್ತದೆ. ಪಾದಯಾತ್ರೆಗೆ ಬೈಂದೂರಿನಿoದಲು ಜನ ಬರುವುದು ವಿಶೇಷವಾಗಿದೆ ಎಂದರು. ಈ ಸಂದರ್ಭದಲ್ಲಿ ದೀಪಕ್ ನಾಯ್ಕ, ಕುಮಾರ ನಾಯ್ಕ, ಕಿರಣ್ ಚಂದಾವರ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ